Site icon Vistara News

Mohan Bhagwat: ಮಣಿಪುರ ಹಿಂಸೆ ನಿಲ್ಲಿಸಿ; ಅಧಿಕಾರ ಹಿಡಿದ ಮೋದಿಗೆ ಟಾಸ್ಕ್‌ ಕೊಟ್ಟ ಮೋಹನ್‌ ಭಾಗವತ್!

Mohan Bhagwat

Manipur Should Be Given Priority, Violence Should Be Stopped: RSS Chief Mohan Bhagwat

ಮುಂಬೈ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿ ಸರ್ಕಾರ ರಚಿಸಿದೆ. ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡುವ ಜತೆಗೆ ತಮ್ಮ ಸಂಪುಟದ 71 ಸಚಿವರಿಗೆ ಖಾತೆಗಳನ್ನೂ ಹಂಚಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ನೂತನ ಸರ್ಕಾರಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಅವರು ಹೊಸ ಸೂಚನೆ ನೀಡಿದ್ದಾರೆ. “ಮಣಿಪುರ ಹಿಂಸಾಚಾರ ನಿಗ್ರಹಿಸುವುದನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕು” ಎಂದು ಸಲಹೆ ನೀಡಿದ್ದಾರೆ.

ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮೋಹನ್‌ ಭಾಗವತ್‌ ಮಾತನಾಡಿದರು. “ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ಹಿಂಸಾಚಾರ ಭುಗಿಲೆದ್ದಿದೆ. ಮಣಿಪುರದ ನಾಗರಿಕರು ಶಾಂತಿ ಸ್ಥಾಪನೆಗಾಗಿ ಒಂದು ವರ್ಷದಿಂದ ಕಾಯುತ್ತಿದ್ದಾರೆ. ಹಾಗಾಗಿ, ಮಣಿಪುರದಲ್ಲಿ ಆದ್ಯತೆಯ ಮೇರೆಗೆ ಶಾಂತಿಸ್ಥಾಪನೆ ಮಾಡಬೇಕು. ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರವನ್ನು ಸಂಪೂರ್ಣವಾಗಿ ತಡೆಯಬೇಕು” ಎಂಬುದಾಗಿ ಹೇಳಿದರು. ಮಣಿಪುರ ಹಿಂಸಾಚಾರದ ಬಳಿಕ ಇದೇ ಮೊದಲ ಬಾರಿಗೆ ಈ ಕುರಿತು ಮೋಹನ್‌ ಭಾಗವತ್‌ ಮೌನ ಮುರಿದಿದ್ದಾರೆ.

“ಭಾರತದ ಚಹರೆ ಈಗ ಬದಲಾಗಿದೆ. ದೇಶವು ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕತೆ, ರಕ್ಷಣೆ, ಕ್ರೀಡೆ, ಸಂಸ್ಕೃತಿ ಹಾಗೂ ತಂತ್ರಜ್ಞಾನ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಭಾರತವು ದಾಪುಗಾಲು ಇಡುತ್ತಿದೆ. ಇದರಿಂದ ಜಗತ್ತಿನಾದ್ಯಂತ ಭಾರತದ ಕುರಿತು ಅಭಿಪ್ರಾಯ ಬದಲಾಗಿದೆ. ಇದಾದ ಮಾತ್ರಕ್ಕೆ, ಭಾರತದಲ್ಲಿರುವ ಎಲ್ಲ ಸಮಸ್ಯೆಗಳು ಬಗೆಹರಿದಂತೆ ಆಗುವುದಿಲ್ಲ. ಎಲ್ಲ ಸವಾಲುಗಳನ್ನು ನಾವು ಮೆಟ್ಟಿನಿಂತಂತೆ ಆಗುವುದಿಲ್ಲ. ಮಣಿಪುರ ಹಿಂಸಾಚಾರದಂತಹ ಪ್ರಕರಣಗಳನ್ನು ನಾವು ಮೆಟ್ಟಿ ನಿಲ್ಲಬೇಕಿದೆ” ಎಂದು ಹೇಳಿದರು.

“ಪ್ರಜಾಪ್ರಭುತ್ವ ಗಟ್ಟಿಯಾಗಲು ಚುನಾವಣೆಗಳು ನಿರ್ಣಾಯಕವಾಗುತ್ತವೆ. ಚುನಾವಣೆ ಸ್ಪರ್ಧೆ ಒಂದು ಮುಖವಾದರೆ, ಪ್ರಜಾಪ್ರಭುತ್ವದ ಘನತೆ ಮತ್ತೊಂದು ಮುಖವಾಗಿದೆ. ಹಾಗಾಗಿ, ಚುನಾವಣೆಯನ್ನು ಯುದ್ಧವಾಗಿ ಪರಿಗಣಿಸಬಾರದು. ಸುಳ್ಳುಗಳನ್ನು ಹೇಳಬಾರದು. ಸ್ಪರ್ಧಿಯೊಬ್ಬ ಎದುರಾಳಿ ಕುರಿತು ಟೀಕೆ ಮಾಡಬಹುದು, ವಿಮರ್ಶೆ ಮಾಡಬಹುದು. ಆದರೆ, ಅವು ವೈಯಕ್ತಿಕವಾಗಿರಬಾರದು, ಸಮಾಜಕ್ಕೆ ಹಾನಿ ಮಾಡುವಂತೆ ಇರಬಾರದು. ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಇದೇ ಕಾರಣಕ್ಕೆ ಬಲಿಷ್ಠ ಪ್ರತಿಪಕ್ಷ ಇರಬೇಕು. ಕಳೆದ 10 ವರ್ಷಗಳಲ್ಲಿ ದೇಶವು ಪ್ರಗತಿ ಹೊಂದಿದೆ. ಹಾಗಂತ, ಎಲ್ಲ ಸಮಸ್ಯೆಗಳು ಬಗೆಹರಿದಿಲ್ಲ. ಅವುಗಳ ಕುರಿತು ನೂತನ ಸರ್ಕಾರ ಗಮನ ಹರಿಸಬೇಕು” ಎಂದು ತಿಳಿಸಿದರು.

ಇದನ್ನೂ ಓದಿ: Modi 3.0 Cabinet: ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ; ಇಲ್ಲಿದೆ 72 ಸಚಿವರು ಹಾಗೂ ಖಾತೆಗಳ ಪಟ್ಟಿ

Exit mobile version