ಇಂಫಾಲ: ಮಣಿಪುರದಲ್ಲಿ ಇಡೀ ಮಾನವ ಸಂಕುಲವೇ ತಲೆ ತಗ್ಗಿಸುವ ಕೃತ್ಯ ನಡೆದಿದೆ. ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅವರನ್ನು ಮೆರವಣಿಗೆ ಮಾಡಿ, ನಂತರ ಅತ್ಯಾಚಾರ ಎಸಗಿರುವ ಪ್ರಕರಣವು ದೇಶವನ್ನೇ ನಲುಗಿಸಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಗಲ್ಲಿಗೇರಿಸಿ (Manipur Video) ಎಂಬ ಆಗ್ರಹ ಕೇಳಿಬರುತ್ತಿವೆ. ಇನ್ನು, ದೌರ್ಜನ್ಯಕ್ಕೀಡಾದ ಇಬ್ಬರಲ್ಲಿ ಒಬ್ಬ ಮಹಿಳೆಯು ನಿರಾಶ್ರಿತರ ಶಿಬಿರದಲ್ಲಿದ್ದು, ಅವರು ಘಟನೆಯನ್ನು ವಿವರಿಸಿದ್ದಾರೆ. “ನಮ್ಮ ಮೇಲೆ ದಾಳಿ ಮಾಡಿದಾಗ ಎಷ್ಟು ಬೇಡಿಕೊಂಡರೂ ಅವರೂ ಕರುಣೆ ತೋರಲಿಲ್ಲ” ಎಂದು ಹೇಳಿದ್ದಾರೆ.
“ಮೇ 4ರಂದು ನಡೆದ ಘಟನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನೂರಾರು ಜನರ ಗುಂಪು ನಮ್ಮ ಮೇಲೆ ದಾಳಿ ನಡೆಸಿತು. ನಮಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಸುಟ್ಟು ಹಾಕಿದರು. ಗಂಡು ಮಕ್ಕಳ ಮೇಲೆ ಹಲ್ಲೆ ನಡೆಸಿದರು. ನಮ್ಮನ್ನು ಹೊರಗೆ ಎಳೆದು, ಮೈಮೇಲಿನ ಬಟ್ಟೆ ಹರಿದು ಹಾಕಿದರು. ನಾನು ನಾಲ್ಕು ಮಕ್ಕಳ ತಾಯಿ ಇದ್ದೇನೆ. ನನ್ನನ್ನು ಬಿಟ್ಟುಬಿಡಿ ಎಂಬುದಾಗಿ ಅಂಗಲಾಚಿದೆ. ಆದರೂ ಅವರು ಕರುಣೆ ತೋರಲಿಲ್ಲ” ಎಂದು 40 ವರ್ಷದ ಆಸುಪಾಸಿನಲ್ಲಿರುವ ಸಂತ್ರಸ್ತೆ ದಿ ಪ್ರಿಂಟ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
“ಕುಕಿ ಸಮುದಾಯದವರು ವಾಸವಿರುವ ಗ್ರಾಮಗಳಿಗೆ ಮೈತೈ ಸಮುದಾಯದವರು ಬೆಂಕಿ ಹಚ್ಚಿದ್ದಾರೆ. ಹಸು, ಹಂದಿ ಹಾಗೂ ಮೇಕೆಗಳನ್ನು ಲೂಟಿ ಮಾಡಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸುವಾಗ, ಬಟ್ಟೆ ಬಿಚ್ಚಿಸಿ ದೌರ್ಜನ್ಯ ಎಸಗುವಾಗ ಇಬ್ಬರು ಪೊಲೀಸರು ಪಕ್ಕದಲ್ಲೇ ಇದ್ದರು. ಆದರೆ, ಅವರು ನಮ್ಮನ್ನು ರಕ್ಷಿಸಲಿಲ್ಲ. ಎರಡು ಗಂಟೆ ನಮ್ಮ ಮೇಲೆ ದೌರ್ಜನ್ಯ ಎಸಗಿದರು. ಯಾರೋ ಒಂದಿಬ್ಬರು ತಮ್ಮ ಟೀ-ಶರ್ಟ್ ಕೊಟ್ಟರು. ಅವುಗಳಿಂದಲೇ ನಮ್ಮ ಮಾನ ಮುಚ್ಚಿಕೊಂಡು ಕಾಡಿನೊಳಗೆ ಓಡಿ ಹೋದೆವು. ಇಲ್ಲದಿದ್ದರೆ ನಮ್ಮನ್ನು ಕೊಲೆ ಮಾಡುತ್ತಿದ್ದರು” ಎಂದು ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ: Manipur Video: ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ನೀಚನ ಮನೆಗೆ ಬೆಂಕಿ ಹಚ್ಚಿದ ಹೆಣ್ಣುಮಕ್ಕಳು
ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಿದ್ದಾರೆ. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದೇ ಘಟನೆ ನಡೆದಿದ್ದು, ಇದುವರೆಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.