Site icon Vistara News

Manipur Video: ಮಣಿಪುರ ದೌರ್ಜನ್ಯ; 5ನೇ ಆರೋಪಿ ಬಂಧನ, ಧ್ವನಿ ಎತ್ತಲು ಮಹಿಳಾ ಆಯೋಗವೂ ನಿರ್ಲಕ್ಷ್ಯ?

Manipur Violence

Manipur Violence: Another woman alleges gang-rape; Incident dates to May 3

ಇಂಫಾಲ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅವರನ್ನು ಮೆರವಣಿಗೆ ಮಾಡಿದ (Manipur Video) ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಮಹಿಳೆಯರ ಪರ ಧ್ವನಿ ಎತ್ತಲು ಮಹಿಳಾ ಆಯೋಗವು ನಿರ್ಲಕ್ಷ್ಯ ವಹಿಸಿತೇ ಎಂಬ ಪ್ರಶ್ನೆಗಳು ಮೂಡಿವೆ.

ಮೇ 4ರಂದೇ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿದ್ದು, ವಿಡಿಯೊಗಳು ಲಭ್ಯವಾಗಿವೆ. ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರವಾಗಿ ತನಿಖೆ ನಡೆಸದ ಕಾರಣ ಅಷ್ಟೊಂದು ಸುದ್ದಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಇನ್ನು, ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ಸುಮೋಟೊ (ಸ್ವಯಂಪ್ರೇರಿತ ದೂರು) ಕೂಡ ದಾಖಲಿಸಿಕೊಂಡಿಲ್ಲ. ಅಷ್ಟೇ ಅಲ್ಲ, ಕಳೆದ ಜೂನ್‌ನಲ್ಲಿ ಒಂದಷ್ಟು ಸಾಮಾಜಿಕ ಹೋರಾಟಗಾರರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪ್ರಕರಣದ ಕುರಿತು ಮಾಹಿತಿ ನೀಡಿದರೂ ಆಯೋಗ ಧ್ವನಿ ಎತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದಾಗ್ಯೂ, ಆರೋಪವನ್ನು ಆಯೋಗ ನಿರಾಕರಿಸಿದೆ.

ಮಣಿಪುರದಲ್ಲಿ ಮಹಿಳಾ ಹಿಂಸಾಚಾರದ ವಿಡಿಯೊ ವೈರಲ್‌ ಆಗಿ, ಭಾರಿ ಆಕ್ರೋಶದ ಬಳಿಕವೇ ಕ್ರಮಕ್ಕೆ ಮಹಿಳಾ ಆಯೋಗ ಆಗ್ರಹಿಸಿದೆ. ಹಾಗಾಗಿ, ಆಯೋಗದ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಇನ್ನು, ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಾಲ್ಕು ಆರೋಪಿಗಳನ್ನು 11 ದಿನ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ. ಮಣಿಪುರದಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಇದುವರೆಗೆ 150ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. ಅದರಲ್ಲೂ, ಮಹಿಳಾ ದೌರ್ಜನ್ಯ ಪ್ರಕರಣವನ್ನು ದೇಶವನ್ನೇ ನಲುಗಿಸಿದೆ.

ಇದನ್ನೂ ಓದಿ: Manipur Violence: ಮಹಿಳೆಯರ ಬೆತ್ತಲೆ ಮೆರವಣಿಗೆ ಬೆನ್ನಲ್ಲೇ, ಕುಕಿ ವ್ಯಕ್ತಿಯ ಕತ್ತರಿಸಿದ ತಲೆ ಇರುವ ವಿಡಿಯೋ ವೈರಲ್

ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಿದ್ದಾರೆ. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದೇ ಘಟನೆ ನಡೆದಿದ್ದು, ಇದುವರೆಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.

Exit mobile version