ಇಂಫಾಲ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ನಡೆಸಿದ ಪ್ರಕರಣವು (Manipur Video) ದೇಶವನ್ನೇ ಬೆಚ್ಚಿಬೀಳಿಸಿದೆ. ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯವನ್ನು ದೇಶಾದ್ಯಂತ ಜನ ಖಂಡಿಸಿದ್ದಾರೆ. ಇನ್ನು, ದೌರ್ಜನ್ಯಕ್ಕೀಡಾದ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆಯ ಪತಿಯು ಮಾಜಿ ಸೈನಿಕರು ಎಂದು ತಿಳಿದುಬಂದಿದೆ. ಅಲ್ಲದೆ, “ಕಾರ್ಗಿಲ್‌ನಲ್ಲಿ ದೇಶವನ್ನು ರಕ್ಷಣೆ ಮಾಡಿದ ನಾನು, ನನ್ನ ಹೆಂಡತಿಯನ್ನೇ ರಕ್ಷಿಸಲು ಆಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು ದೇಶಕ್ಕಾಗಿ ಹೋರಾಡಿದೆ. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ಶಾಂತಿ ಸ್ಥಾಪನೆ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿ ಸೇವೆ ಸಲ್ಲಿಸಿದೆ. ನಾನು ನನ್ನ ದೇಶವನ್ನು ರಕ್ಷಣೆ ಮಾಡಿದೆ. ಅದರೆ, ನಿವೃತ್ತನಾದ ನಂತರ ನನ್ನ ಪತ್ನಿಯನ್ನು, ನನ್ನೂರಿನ ಗ್ರಾಮಸ್ಥರನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ, ನಾನು ತುಂಬ ದುಃಖಿತನಾಗಿದ್ದೇನೆ” ಎಂಬುದಾಗಿ ನಿವೃತ್ತ ಯೋಧ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್‌ನಲ್ಲಿ ಯೋಧನು ಸುಬೇದಾರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ, ಈ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. “ಮೋದಿ ಸರ್ಕಾರ ಯೋಧರ ಬಗ್ಗೆ ಮಾತನಾಡುತ್ತದೆ. ಆದರೆ, ನಿವೃತ್ತ ಯೋಧನ ಪತ್ನಿಗೆ ರಕ್ಷಣೆ ಇಲ್ಲ” ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಇನ್ನೊಂದು ಬೀಭತ್ಸ ಕೃತ್ಯ; ರಾಜಧಾನಿಯಲ್ಲೇ ಇಬ್ಬರು ಕುಕೀ ಯುವತಿಯರ ರೇಪ್, ಕೊಲೆ
ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಿದ್ದಾರೆ. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದೇ ಘಟನೆ ನಡೆದಿದ್ದು, ಇದುವರೆಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.