ಇಂಫಾಲ: ಮಣಿಪುರದಲ್ಲಿ ಮೇ 3ರಿಂದ ಹಿಂಸಾಚಾರ (Manipur Violence) ಆರಂಭವಾದ ಬಳಿಕ ನಡೆಯುತ್ತಿರುವ ಕೊಲೆ, ಮಹಿಳೆಯರ ಮೇಲೆ ದೌರ್ಜನ್ಯ, ಗಲಭೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇಬ್ಬರು ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಅತ್ಯಾಚಾರ, ಕೊಲೆ ಪ್ರಕರಣಗಳು ಸುದ್ದಿಯಾದ ಬೆನ್ನಲ್ಲೇ, ಮತ್ತೊಂದು ಬೀಭತ್ಸ ಕೃತ್ಯ ಬೆಳಕಿಗೆ ಬಂದಿದೆ. ಮಣಿಪುರದಲ್ಲಿ ಹಿಂಸಾಚಾರ ಆರಂಭವಾದಾಗಿನಿಂದ ಇದುವರೆಗೆ 30 ಮಕ್ಕಳು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಮಣಿಪುರದಲ್ಲಿ ಮೇ 3ರಿಂದ ಇದುವರೆಗೆ ಶಾಲೆಗೆ ಹೋಗುತ್ತೇವೆ ಎಂದು ಮನೆಯಿಂದ ತೆರಳಿದ 30 ಮಕ್ಕಳು ಮನೆಗೆ ವಾಪಸಾಗಿಲ್ಲ. ಮಕ್ಕಳು ಕಾಣೆಯಾಗಿರುವ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೂ, ಎಫ್‌ಐಆರ್ ದಾಖಲಿಸಿದರೂ ಇದುವರೆಗೆ 30 ಮಕ್ಕಳು ಪತ್ತೆಯಾಗಿಲ್ಲ. ಎಲ್ಲಿದ್ದಾರೋ, ಹೇಗಿದ್ದಾರೋ, ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಮಕ್ಕಳ ಪೋಷಕರು ಕಾಯುತ್ತಲೇ ಇದ್ದಾರೆ. ಆದರೆ, ಮಕ್ಕಳು ಹಿಂತಿರುಗಿಲ್ಲ. ಇದರಿಂದಾಗಿ ಯಾವ ಪೋಷಕರೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಹಿರಿಯರ ಬಗ್ಗೆಯೂ ಮಾಹಿತಿ ಇಲ್ಲ
ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ 150ಕ್ಕೂ ಅಧಿಕ ಮಂದಿ ಹತ್ಯೆಗೀಡಾಗಿದ್ದರೆ, ನಾಪತ್ತೆಯಾದವರ ಸಂಖ್ಯೆ ಇನ್ನೂ ನಿಖರವಾಗಿ ತಿಳಿದಿಲ್ಲ. ಸಾಮಾನ್ಯ ಜನರಲಷ್ಟೇ ಅಲ್ಲ, ಸಂಶೋಧಕರು, ಸಮಾಜ ಸೇವಕರು ಸೇರಿ ಹಲವರು ಕಾಣೆಯಾಗಿದ್ದಾರೆ. ಇವರನ್ನು ಅಪಹರಣ ಮಾಡಿದ್ದಾರೋ, ಹಿಂಸೆಗೆ ಬಲಿಯಾಗಿದ್ದಾರೋ, ಇವರು ಎಲ್ಲಾದರೂ ಅಡಗಿಕೊಂಡಿದ್ದಾರೋ ಎಂಬುದು ಸೇರಿ ಯಾವುದೇ ಸುಳಿವು ಅವರ ಕುಟುಂಬಸ್ಥರಿಗಿಲ್ಲ.
ಇದನ್ನೂ ಓದಿ: Manipur Video: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ; ಸಿಬಿಐ ತನಿಖೆಗೆ ವಹಿಸಿದ ಕೇಂದ್ರ ಸರ್ಕಾರ
ಅಟೋಮ್ ಸಮರೇಂದ್ರ ಸಿಂಗ್ ಎಂಬ ಪತ್ರಕರ್ತ, ಸಂಶೋಧಕ ಹಾಗೂ ಸಮಾಜ ಸೇವಕ ಮೇ 6ರಂದೇ ನಾಪತ್ತೆಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ, ಶೋಧ ನಡೆಸಿದರೂ ಇವರ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ಇವರ ರೀತಿಯಲ್ಲಿಯೇ ಹಲವು ಜನ ಕಾಣೆಯಾಗಿದ್ದಾರೆ. ಅವರ ಬಗ್ಗೆ ಕುಟುಂಬಸ್ಥರಿಗೆ ಇದುವರೆಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ.
ಮಣಿಪುರ ಹಿಂಸಾಚಾರ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿದೆ. ಮಾತುಕತೆಗೆ ಸಿದ್ಧ ಎಂದು ಕೂಡ ತಿಳಿಸಿದೆ. ಇಷ್ಟಾದರೂ ಮಣಿಪುರ ಹಿಂಸೆಯು ತಹಬಂದಿಗೆ ಬರುತ್ತಿಲ್ಲ. ಕುಕಿ ಹಾಗೂ ಮೈತೈ ಸಮುದಾಯಗಳ ನಡುವಿನ ಹಿಂಸಾಚಾರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದು ಮಣಿಪುರ ಮಾತ್ರವಲ್ಲ, ದೇಶವನ್ನೇ ಆತಂಕಕ್ಕೀಡು ಮಾಡಿದೆ.