ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur Violence) ಹಿಂಸಾಚಾರ ಭುಗಿಲೆದ್ದಿರುವ ಬೆನ್ನಲ್ಲೇ ಬಂಡುಕೋರರ ಹತ್ಯೆ ಕುರಿತು ಮುಖ್ಯಮಂತ್ರಿ ಬಿರೇನ್ ಸಿಂಗ್ ಮಾಹಿತಿ ನೀಡಿದ್ದಾರೆ. “ಮಣಿಪುರದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಲ್ಲಿ ಭದ್ರತಾ ಸಿಬ್ಬಂದಿಯು ಸುಮಾರು 40 ಕುಕಿ ಬಂಡುಕೋರರನ್ನು ಹೊಡೆದುರುಳಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಇಂಫಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಣಿಪುರದಲ್ಲಿ ಹಿಂಸಾಚಾರ ಜಾಸ್ತಿಯಾಗಿದೆ. ಬಂಡುಕೋರರ ಹಿಂಸಾಚಾರಕ್ಕೆ ನಾಲ್ವರು ನಾಗರಿಕರು ಹಾಗೂ ಒಬ್ಬ ಅರೆಸೇನಾ ಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಹಾಗಾಗಿ, ಬಂಡುಕೋರರ ಹಾವಳಿ ಹೆಚ್ಚಾಗಿರುವ ಸ್ಥಳಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಕಾರ್ಯಾಚರಣೆ ವೇಳೆ 40 ಕುಕಿ ಬಂಡುಕೋರರನ್ನು ಹೊಡೆದುರುಳಿಸಲಾಗಿದೆ. ಹಾಗೆಯೇ, ಕೆಲವರನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
#ManipurViolence | In retaliatory and defensive operations against these terrorist groups who are using sophisticated arms against the civilian population, around 30 of these terrorists have been killed in different areas. A few have also been arrested by the security forces,… pic.twitter.com/cVNXHxZ2yV
— ANI (@ANI) May 28, 2023
ಮಣಿಪುರದಲ್ಲಿ ಬುಡಕಟ್ಟು ಹಾಗೂ ಬುಡಕಟ್ಟು ಅಲ್ಲದ ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ. ಶನಿವಾರ ಸಂಜೆ (May 27) ಮತ್ತೆ ಹೊಸದಾಗಿ ಹಿಂಸಾಚಾರ ಆರಂಭವಾದ ಕಾರಣ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಣಿಪುರದ ರಾಜಧಾನಿ ಇಂಪಾಲ್‌ನ ನ್ಯೂಚಾಕಾನ್ ಪ್ರದೇಶದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಕೆಲ ದಿನಗಳ ಹಿಂದಷ್ಟೇ ಹಿಂಸಾಚಾರ ಸಂಭವಿಸಿತ್ತು. ಈ ಪ್ರದೇಶದಲ್ಲಿ ಮತ್ತೆ ಕರ್ಫ್ಯೂ ಜಾರಿ ಮಾಡಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಮುಂದಾಗಿದ್ದವು ಈ ಮೊದಲು ಕರ್ಫ್ಯೂ ಸಂಜೆ ನಾಲ್ಕು ಗಂಟೆಯವರೆಗೆ ಸಡಿಲ ಮಾಡಲಾಗಿತ್ತು. ಆದರೆ, ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕರ್ಫ್ಯೂ ಹೇರಲಾಗಿತ್ತು.
ಎರಡು ವಾರಗಳ ಹಿಂದೆ ಸಂಭವಿಸಿದ ಹಿಂಸಾಚಾರದಲ್ಲಿ ಸುಮಾರು 7500 ಜನರು ಸಂತ್ರಸ್ತರಾಗಿದ್ದರು. ಅವರನ್ನು ಸುರಕ್ಷಿತ ಸ್ಥಳಾಂತರ ಮಾಡಲಾಗಿತ್ತು. ಬಹುಸಂಖ್ಯಾತ ಮೈತೈ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರ್ಪಡೆ ಮಾಡಲು ವಿವಿಧ ಬುಡಕಟ್ಟು ಸಮುದಾಯವರ ಪ್ರಬಲ ವಿರೋಧವಿದೆ. ಈ ಹಿನ್ನೆಲೆಯಲ್ಲಿ ಮೈತೈ ಮತ್ತು ಆಲ್ ಟ್ರೈಬಲ್ ಸ್ಟುಡೆಂಟ್ಸ್ ಯುನಿಯನ್ ನಡುವಿನ ಸಂಘರ್ಷವೇ ಮಣಿಪುರದ ಹಿಂಸಾಚಾರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಿಸ್ತಾರ Explainer: ಮಣಿಪುರದಲ್ಲಿ ಮತ್ತೆ ಹಿಂಸೆಯ ಭುಗಿಲು; ಬುಡಕಟ್ಟು ಜನರ ಕದನಕ್ಕೆ ಇಲ್ಲಿದೆ ಕಾರಣ