ಇಂಫಾಲ: ಜುಲೈ 22 ಹಾಗೂ 23ರಂದು, ಕೇವಲ ಎರಡು ದಿನಗಳಲ್ಲಿ ಸುಮಾರು 301 ಮಕ್ಕಳು ಸೇರಿದಂತೆ 718 ಮ್ಯಾನ್ಮಾರ್ ಪ್ರಜೆಗಳು ಮಣಿಪುರದ ಒಳಗೆ ಪ್ರವೇಶಿಸಿದ್ದು, ʼಇವರನ್ನು ಹೊರ ತಳ್ಳಿʼ ಎಂದು ಮಣಿಪುರ ಸರ್ಕಾರ ಗಡಿ ರಕ್ಷಿಸುವ ಹೊಣೆ ಹೊತ್ತಿರುವ ಅಸ್ಸಾಂ ರೈಫಲ್ಸ್‌ಗೆ ಹೇಳಿದೆ.
ಮಣಿಪುರ ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಅವರು ಸೋಮವಾರ ತಡರಾತ್ರಿ ಅಸ್ಸಾಂ ರೈಫಲ್ಸ್‌ಗೆ ಈ ಕುರಿತು ಸೂಚನೆ ನೀಡಿದ್ದು, ಸರಿಯಾದ ಪ್ರಯಾಣ ದಾಖಲೆಗಳು ಇಲ್ಲದೆ ಇವರು ಭಾರತದೊಳಕ್ಕೆ ಪ್ರವೇಶಿಸಲು ಹೇಗೆ ಅವಕಾಶ ನೀಡಲಾಯಿತು ಎಂದು ವಿವರ ನೀಡುವಂತೆ ತಿಳಿಸಿದ್ದಾರೆ. “ಈ ಹಿಂದೆ ಇದೇ ರೀತಿಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಸೂಕ್ತ ವೀಸಾ/ ಪ್ರಯಾಣದ ದಾಖಲೆಗಳಿಲ್ಲದೆ ಯಾವುದೇ ಕಾರಣಕ್ಕೂ ಮ್ಯಾನ್ಮಾರ್ ಪ್ರಜೆಗಳು ಮಣಿಪುರಕ್ಕೆ ಪ್ರವೇಶಿಸುವುದನ್ನು ತಡೆಯುವಂತೆ ಅಸ್ಸಾಂ ರೈಫಲ್ಸ್‌ಗೆ ಸ್ಪಷ್ಟವಾಗಿ ತಿಳಿಸಿತ್ತು” ಎಂದಿದ್ದಾರೆ.
ಮ್ಯಾನ್ಮಾರ್‌ನ ಖಂಪತ್‌ನಲ್ಲಿ ನಡೆಯುತ್ತಿರುವ ಗಲಭೆಗಳ ಪರಿಣಾಮ, ಜುಲೈ 23ರಂದು 718 ಹೊಸ ನಿರಾಶ್ರಿತರು ಇಂಡೋ-ಮ್ಯಾನ್ಮಾರ್ ಗಡಿಯನ್ನು ದಾಟಿ ಚಾಂಡೆಲ್ ಜಿಲ್ಲೆಯ ಮೂಲಕ ಮಣಿಪುರವನ್ನು ಪ್ರವೇಶಿಸಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ಚಾಂಡೆಲ್ ಜಿಲ್ಲೆಯ ಉಪ ಆಯುಕ್ತರಿಗೆ ಮಾಹಿತಿ ನೀಡಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಅಸ್ಸಾಂ ರೈಫಲ್ಸ್ ಪ್ರಾಧಿಕಾರದಿಂದ ವಿವರವಾದ ವರದಿಯನ್ನು ಕೇಳಿದೆ. ಈ 718 ಮ್ಯಾನ್ಮಾರ್ ಪ್ರಜೆಗಳು ಸರಿಯಾದ ಪ್ರಯಾಣ ದಾಖಲೆಗಳಿಲ್ಲದೆ ಚಾಂಡೆಲ್ ಜಿಲ್ಲೆಯಲ್ಲಿ ಭಾರತಕ್ಕೆ ಪ್ರವೇಶಿಸಲು ಏಕೆ ಮತ್ತು ಹೇಗೆ ಅನುಮತಿಸಲಾಗಿದೆ ಎಂದು ಪ್ರಶ್ನಿಸಲಾಗಿದ್ದು, ಇವರನ್ನು ತಕ್ಷಣವೇ ಹಿಂದಕ್ಕೆ ತಳ್ಳಲು ಕಟ್ಟುನಿಟ್ಟಾದ ಸಲಹೆ ನೀಡಲಾಗಿದೆ.
ಮ್ಯಾನ್ಮಾರ್‌ನಿಂದ ಆಗಮಿಸಿದ ಅಕ್ರಮ ವಲಸಿಗರು ಹಾಗೂ ಕುಕೀ ಬುಡಕಟ್ಟು ಜನಾಂಗದವರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದು, ಇವರಿಗೂ ಮೈತೈಗಳಿಗೂ ನಡುವೆ ನಿರಂತರ ಅಸಮಾಧಾನ ಹೊಗೆಯಾಡುತ್ತಿದೆ.
ಏತನ್ಮಧ್ಯೆ, ಮ್ಯಾನ್ಮಾರ್‌ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮಹಿಳೆಯೊಬ್ಬಳನ್ನು ಕೊಂದಿರುವ ವೀಡಿಯೊವನ್ನು ರಾಜ್ಯದಲ್ಲಿ ನಡೆದ ಘಟನೆ ಎಂದು ಹಂಚಿದ ಕುರಿತು ಮಣಿಪುರ ಪೊಲೀಸರು ನಕಲಿ ಸುದ್ದಿ ದೂರು ದಾಖಲಿಸಿದ್ದಾರೆ. ಮೇ 4ರಂದು ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ದೇಶಾದ್ಯಂತ ಆಕ್ರೋಶ ಎಬ್ಬಿಸುವ ಜತೆಗೆ ಮಣಿಪುರದಲ್ಲಿಯೂ ಮತ್ತೊಂದು ಸುತ್ತಿನ ಗಲಭೆ ಏಳಲು ಕಾರಣವಾಗಿತ್ತು. ಈ ಹಿಂದೆ ನಡೆದ ಹಿಂಸಾಚಾರದಲ್ಲಿ 160 ಜನ ಸತ್ತು ನೂರಾರು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: Manipur Violence: ಮಣಿಪುರ ಅಲ್ಲ ‘ಹೆಣಪುರ’; ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಜೀವಂತ ಸುಟ್ಟ ದುರುಳರು