ನವದೆಹಲಿ: ಮಣಿಪುರ (Manipur Violence) ಲೈಂಗಿಕ ದೌರ್ಜನ್ಯ (Sexual Assault Cases) ಪ್ರಕರಣಗಳ ತನಿಖೆಗೆ, ಕೇಂದ್ರ ತನಿಖಾ ದಳ(Central Bureau of Investigation) 53 ಸದಸ್ಯರ ತಂಡವನ್ನು (CBI Team) ರಚಿಸಿದೆ. ಈ ತಂಡದಲ್ಲಿ ಲವ್ಲೀ ಕಟಿಯಾರ್ ಹಾಗೂ ನಿರ್ಮಲಾ ದೇವಿ ಎಸ್ ಎಂಬ ಇಬ್ಬರು ಮಹಿಳಾ ಡಿಐಜಿಗಳಿದ್ದಾರೆ. ಕುಕಿ ಸಮುದಾಯಕ್ಕೆ ಸೇರಿದ ಮೂವರ ಹೆಣ್ಣು ಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿ, ಈ ಪೈಕಿ ಒಬ್ಬಳನ್ನು ಗ್ಯಾಂಗ್ ರೇಪ್ ಮಾಡಿದ ಪ್ರಕರಣ ಬೆಳಕಿಗೆ ಬಂದ ಕೂಡಲೇ, ಸರ್ಕಾರವು ಮಣಿಪುರದಲ್ಲಾದ ಎಲ್ಲ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಸಿಬಿಐನ ವಿಶೇಷ ತನಿಖಾ ತಂಡವು ಈಗಾಗಲೇ ಈಶಾನ್ಯ ರಾಜ್ಯದಲ್ಲಿನ ಇತರ ಆರು ಹಿಂಸಾಚಾರ ಪ್ರಕರಣಗಳು ಮತ್ತು ರಾಜ್ಯದ ಆಯುಧಾಗಾರಗಳಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವುದರ ಕುರಿತು ತನಿಖೆ ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: Independence Day 2023: ಮಣಿಪುರ ಶಾಂತಿಯಿಂದ ಡಿಜಿಟಲ್ ಕ್ರಾಂತಿವರೆಗೆ; ಮೋದಿ ಕೆಂಪು ಕೋಟಿ ಭಾಷಣದ ಮೋಡಿ
ಕಳೆದ ಮೂರ್ನಾಲ್ಕು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಈವರೆಗೆ 160 ಜನರು ಮೃತಪಟ್ಟಿದ್ದಾರೆ. ಮೇ 3ರಿಂದ ಮಣಿಪುರದ ಮೈತೈ ಮತ್ತು ಕುಕಿ ಸಮುದಾಯದ ನಡುವೆ ಹಿಂಸಾಚಾರ ನಡೆಯುತ್ತಿದೆ. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೈ ಸಮುದಾಯದ ಬೇಡಿಕೆಯನ್ನು ವಿರೋಧಿಸಿ, ಕುಕಿ ಸಮುದಾಯವು ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಿದ ನಂತರ ಹಿಂಸಾಚಾರ ಶುರುವಾಯಿತು.
ಮಣಿಪುರದ ಒಟ್ಟು ಜನಸಂಖ್ಯೆಲ್ಲಿ ಮೈತೈ ಸಮುದಾಯವರು ಶೇ.53ರಷ್ಟಿದ್ದು, ಬಹುತೇಕ ಇಂಫಾಲ್ ಕಣಿವೆಯಲ್ಲಿ ವಾಸವಾಗಿದ್ದಾರೆ. ನಾಗಾಸ್ ಮತ್ತು ಕುಕಿ ಸಮುದಾಯವರು ಶೇ.40ರಷ್ಟಿದ್ದು, ಪರ್ವತ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಹಿಂಸಾಚಾರದಿಂದಾಗಿ ಬಹಳಷ್ಟು ಜನರು ನಿರ್ಗತಿಕರಾಗಿದ್ದು, ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.