Site icon Vistara News

Manipur Violence: ದಿನಸಿ ಅಂಗಡಿಯಲ್ಲಿ ಮಹಿಳೆಗೆ ಬಿಎಸ್ಎಫ್ ಯೋಧನಿಂದ ಲೈಂಗಿಕ ಕಿರುಕುಳ!

BSF Jawan molested woman

ನವದೆಹಲಿ: ಮಣಿಪುರದಲ್ಲಿ (Manipur Violence) ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಗ್ಯಾಂಗ್ ರೇಪ್ ಮಾಡಿದ್ದ ಪ್ರಕರಣದಿಂದ ಇಡೀ ದೇಶವೇ ತಲೆ ತಗ್ಗಿಸಿತ್ತು. ಈಗ, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಅಂಥದ್ದೇ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಗಡಿ ಭದ್ರತಾ ಪಡೆ (BSF)ಯ ಹೆಡ್ ಕಾನ್ಸ್‌ಟೇಬಲ್‌ (Head Constable) ಒಬ್ಬರು ದಿನಸಿ ಅಂಗಡಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ (Molestation) ನೀಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Video Viral) ಆಗಿದೆ. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಆರೋಪಿ ಯೋಧನನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.

ದಿನಸಿ ಅಂಗಡಿಯಲ್ಲಿ ನಡೆದ ಈ ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಭಾರೀ ವೈರಲ್ ಆಗಿವೆ. ಬಿಎಸ್ಎಫ್ ಸಮವಸ್ತ್ರದಲ್ಲಿರುವ ವ್ಯಕ್ತಿಯ ಐಎನ್ಎಎಸ್ ರೈಫಲ್ ಹೊಂದಿದ್ದು, ಮಹಿಳೆಗೆ ಎಲ್ಲೆಂದರಲ್ಲಿ ಮುಟ್ಟಿ, ಆಕೆಗೆ ಲೈಂಗಿಕ ಕಿರುಕುಳ ನೀಡುವ ದೃಶ್ಯಗಳು ವಿಡಿಯೋದಲ್ಲಿವೆ. ಆರೋಪಿ ಯೋಧನನ್ನು ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ.

ಈ ಘಟನೆಯು ಇಂಫಾಲ್‍‌ನಲ್ಲಿ ಜುಲೈ 20ರಂದು ನಡೆದಿದೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಸತೀಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆತನ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಆರೋಪಿ ಯೋಧನ ವಿರುದ್ಧ ಬಿಎಸ್ಎಫ್ ಆಂತರಿಕ ತನಿಖೆಯನ್ನೂ ಆರಂಭಿಸಿದೆ. ಆತನನ್ನು ಬಂಧಿಸಿ ಇಡಲಾಗಿದ್ದು, ಇಲಾಖಾ ಪ್ರಕ್ರಿಯೆಗಳನ್ನು ಯೋಧನ ವಿರುದ್ಧ ಆರಂಭಿಸಲಾಗಿದೆ ಎಂದು ಅಧಿಕಾರಿಯು ತಿಳಿಸಿದ್ದಾರೆ.

ಮಣಿಪುರದಲ್ಲಿ ದೌರ್ಜನ್ಯಕ್ಕೀಡಾದ ಮಹಿಳೆಯ ಪತಿ ಕಾರ್ಗಿಲ್‌ ಯೋಧ

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ನಡೆಸಿದ ಪ್ರಕರಣವು (Manipur Video) ದೇಶವನ್ನೇ ಬೆಚ್ಚಿಬೀಳಿಸಿದೆ. ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯವನ್ನು ದೇಶಾದ್ಯಂತ ಜನ ಖಂಡಿಸಿದ್ದಾರೆ. ಇನ್ನು, ದೌರ್ಜನ್ಯಕ್ಕೀಡಾದ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆಯ ಪತಿಯು ಮಾಜಿ ಸೈನಿಕರು ಎಂದು ತಿಳಿದುಬಂದಿದೆ. ಅಲ್ಲದೆ, “ಕಾರ್ಗಿಲ್‌ನಲ್ಲಿ ದೇಶವನ್ನು ರಕ್ಷಣೆ ಮಾಡಿದ ನಾನು, ನನ್ನ ಹೆಂಡತಿಯನ್ನೇ ರಕ್ಷಿಸಲು ಆಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ದೇಶಕ್ಕಾಗಿ ಹೋರಾಡಿದೆ. ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ಶಾಂತಿ ಸ್ಥಾಪನೆ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿ ಸೇವೆ ಸಲ್ಲಿಸಿದೆ. ನಾನು ನನ್ನ ದೇಶವನ್ನು ರಕ್ಷಣೆ ಮಾಡಿದೆ. ಅದರೆ, ನಿವೃತ್ತನಾದ ನಂತರ ನನ್ನ ಪತ್ನಿಯನ್ನು, ನನ್ನೂರಿನ ಗ್ರಾಮಸ್ಥರನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ, ನಾನು ತುಂಬ ದುಃಖಿತನಾಗಿದ್ದೇನೆ” ಎಂಬುದಾಗಿ ನಿವೃತ್ತ ಯೋಧ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ನಿಯಂತ್ರಣಕ್ಕೆ ಬಾರದ ಮಣಿಪುರ ಹಿಂಸಾಚಾರ; ಮತ್ತೆ ಫೈರಿಂಗ್​, 24 ಗಂಟೆಯಲ್ಲಿ 9 ಜನರ ಸಾವು

ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್‌ನಲ್ಲಿ ಯೋಧನು ಸುಬೇದಾರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ, ಈ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. “ಮೋದಿ ಸರ್ಕಾರ ಯೋಧರ ಬಗ್ಗೆ ಮಾತನಾಡುತ್ತದೆ. ಆದರೆ, ನಿವೃತ್ತ ಯೋಧನ ಪತ್ನಿಗೆ ರಕ್ಷಣೆ ಇಲ್ಲ” ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಸಾವಿರಾರು ಜನ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಇದಾದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯೊಬ್ಬರ ಸಹೋದರನನ್ನು ಕೊಲೆ ಮಾಡಿದ್ದಾರೆ. ನಮ್ಮ ಮೇಲೂ ಹಲ್ಲೆಯಾಗಿದೆ ಎಂದು ಮಹಿಳೆಯರ ಕುಟುಂಬಸ್ಥರು ತಿಳಿಸಿದ್ದಾರೆ. ಮೇ 4ರಂದೇ ಘಟನೆ ನಡೆದಿದ್ದು, ಇದುವರೆಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version