ಇಂಫಾಲ: ಮಣಿಪುರದಲ್ಲಿ ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ವಿಚಾರದ ಕಾರಣಕ್ಕೆ ಭುಗಿಲೆದ್ದಿರುವ ಸಂಘರ್ಷ, ಹಿಂಸಾಚಾರವು (Manipur Violence) ಮತ್ತೊಂದು ಹಂತ ತಲುಪಿದೆ. ಇದುವರೆಗೆ ರಾಜಕಾರಣಿಗಳ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದ ಬಂಡುಕೋರರೀಗ ಯೋಧರೊಬ್ಬರ ಮನೆಗೆ ಬೆಂಕಿ ಹಚ್ಚುವ ಮೂಲಕ ಕುಕೃತ್ಯ ಎಸಗಿದ್ದಾರೆ. ಬಂಡುಕೋರರು ಶಸ್ತ್ರಾಸ್ತ್ರ ಕದಿಯುವುದನ್ನು ವಿಫಲಗೊಳಿಸಿದ ಹಿನ್ನೆಲೆಯಲ್ಲಿ ಯೋಧರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ತೌಂಬಾಲ್ ಜಿಲ್ಲೆಯಲ್ಲಿ ಇತ್ತೀಚೆಗೆ ಬಂಡುಕೋರರು ಪೊಲೀಸರ ಶಸ್ತ್ರಾಗಾರದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳತನ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ, ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB) ಯೋಧರೊಬ್ಬರು ಬಂಡುಕೋರರನ್ನು ಹಿಮ್ಮೆಟ್ಟಿಸಿದ್ದರು. ಕೆಲ ದಿನಗಳ ಹಿಂದೆ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಸಂಘರ್ಷದಲ್ಲಿ 27 ವರ್ಷದ ಸಮರಾಮ್ ಎಂಬಾತ ಹತ್ಯೆಗೀಡಾಗಿದ್ದ. ಇದಾದ ಬಳಿಕ ಉದ್ರಿಕ್ತರ ಗುಂಪು ಶಸ್ತ್ರಾಸ್ತ್ರ ಕಳ್ಳತನಕ್ಕೆ ಮುಂದಾಗಿತ್ತು.
ಸುಮಾರು 700 ಬಂಡುಕೋರರು ವಾಂಗ್‌ಬಾಲ್‌ನಲ್ಲಿರುವ ಶಸ್ತ್ರಾಗಾರದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳ್ಳತನ ಮಾಡಲು ಮುಂದಾಗಿದ್ದರು. ಆದರೆ, ಯೋಧರೊಬ್ಬರು ಬಂಡುಕೋರರನ್ನು ಹಿಮ್ಮೆಟ್ಟಿಸಿ, ಶಸ್ತ್ರಾಸ್ತ್ರಗಳ ಕಳ್ಳತನವನ್ನು ವಿಫಲಗೊಳಿಸಿದ್ದರು. ಇದೇ ಸಿಟ್ಟಿನಿಂದಾಗಿ ಬಂಡುಕೋರರು ಯೋಧನ ಮನೆಗೆ ಬೆಂಕಿ ಹಚ್ಚಿದ್ದಾರೆ. ಮಣಿಪುರದಲ್ಲಿ ಕಳೆದ ಎರಡು ತಿಂಗಳಿಂದ ಹಿಂಸಾಚಾರ ನಡೆಯುತ್ತಿದ್ದು, ನೂರಾರು ಜನ ಬಲಿಯಾಗಿದ್ದಾರೆ. ಸಾವಿರಾರು ಜನ ಹಿಂಸಾಚಾರದಿಂದ ಗಾಯಗೊಂಡಿದ್ದಾರೆ.
ಕೆಲ ದಿನಗಳಿಂದ ಉದ್ರಿಕ್ತರು ಸೈನಿಕರ ಮೇಲೂ ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಕೆಲ ದಿನಗಳ ಹಿಂದಷ್ಟೇ ಸುಮಾರು 1,500 ಮಹಿಳೆಯರು ಸೈನಿಕರನ್ನೇ ಅಡ್ಡಹಾಕಿ 12 ಬಂಡುಕೋರರನ್ನು ಬಿಡಿಸಿಕೊಂಡು ಹೋಗಿದ್ದರು. ಮಹಿಳೆಯರ ಗುಂಪೊಂದು ಸೈನಿಕರನ್ನು ಸುತ್ತುವರಿದು, 12 ಕಾಂಗ್ಲೇಯಿ ಯವೋಲ್ ಕನ್ನಾ ಲುಪ್ (KYKL) ಉಗ್ರರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಸೇನೆಯೇ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ; ಶಸ್ತ್ರಾಸ್ತ್ರ ಲೂಟಿ ಮಾಡಲು ಯತ್ನಿಸಿದ ಗಲಭೆಕೋರರನ್ನು ಓಡಿಸಿದ ಸೇನೆ, ಒಬ್ಬನ ಹತ್ಯೆ
ಎರಡು ತಿಂಗಳಿಂದ ಅಶಾಂತಿ ಸೃಷ್ಟಿಯಾಗಿರುವ ರಾಜ್ಯದಲ್ಲಿ ಶಾಂತಿಸ್ಥಾಪನೆ ಕುರಿತು ಭಾರತೀಯ ಸೇನೆಯು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ, ಯೋಧರು ಬಂಡುಕೋರರನ್ನು ನಿಗ್ರಹಿಸಲು ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಹೀಗೆ ಕಾರ್ಯಾಚರಣೆ ಕೈಗೊಳ್ಳುವಾಗ 12 ಬಂಡುಕೋರರನ್ನು ಬಂಧಿಸಿದ್ದರು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ 1,500ಕ್ಕೂ ಅಧಿಕ ಮಹಿಳೆಯರು ಸೈನಿಕರನ್ನು ಅಡ್ಡಹಾಕಿ, ಅವರಿಂದ ಬಂಡುಕೋರರನ್ನು ಬಿಡಿಸಿಕೊಂಡು ಹೋಗಿದ್ದರು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ