ಇಂಫಾಲ: ಮಣಿಪುರ ಹಿಂಸಾಚಾರವನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಸಂಸತ್‌ನಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಇನ್ನು ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಗುರುವಾರ ಸಂಜೆ 4 ಗಂಟೆಗೆ ಮಾತನಾಡಲಿದ್ದು, ಮಣಿಪುರ ಹಿಂಸಾಚಾರದ ಕುರಿತು ಪ್ರಸ್ತಾಪಿಸಲಿದ್ದಾರೆ. ಆದರೆ, ಇದರ ಬೆನ್ನಲ್ಲೇ ಮಣಿಪುರದಲ್ಲಿ ಮೇ 3ರಂದು ನಡೆದಿರುವ ಮತ್ತೊಂದು ಅನಾಚಾರ ಬಯಲಾಗಿದೆ. ಹೌದು, ಮೇ 3ರಂದು ಮಹಿಳೆ ಮೇಲೆ ದುರುಳರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಸುದ್ದಿಯಾಗಿದೆ.
ಹೌದು, ಚುರಚಂದ್‌ಪುರ ಜಿಲ್ಲೆಯಲ್ಲಿ ಮೇ 3ರಂದು 37 ವರ್ಷದ ಮಹಿಳೆಯೊಬ್ಬರ ಮೇಲೆ ಐದಾರು ಜನ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇದುವರೆಗೆ ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಸುಮ್ಮನಾಗಿದ್ದ ಮಹಿಳೆ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇ 3ರಂದು ಮಣಿಪುರದಲ್ಲಿ ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಾಗ ಬಂಡುಕೋರರಿಂದ ತಪ್ಪಿಸಿಕೊಳ್ಳಲು ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಯತ್ನಿಸಿದಾಗ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆ ಈಗ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.
“ಮೇ 3ರಂದು ನಾನು, ನನ್ನ ಇಬ್ಬರು ಗಂಡು ಮಕ್ಕಳು, ಒಬ್ಬ ನಾದಿನಿ ಸೇರಿ ಹಲವು ಸಂಬಂಧಿಕರು ಪರಾರಿಯಾಗಲು ಯತ್ನಿಸಿದೆವು. ದುಷ್ಕರ್ಮಿಗಳ ತಂಡವು ದಾಳಿ ಮಾಡುತ್ತಿದೆ ಎಂಬ ವಿಷಯ ಗೊತ್ತಾದಾಗ ನನ್ನ ಪುತ್ರರು, ನಾದಿನಿ ಸೇರಿ ಎಲ್ಲ ಸಂಬಂಧಿಕರು ಓಡಿ ಹೋದರು. ನಾನೇ ಅವರನ್ನೆಲ್ಲ ಕಳುಹಿಸಿದೆ. ಇದಾದ ಬಳಿಕ ಐದಾರು ಜನ ನನ್ನ ಮೇಲೆ ಎರಗಿದರು. ಅವಾಚ್ಯ ಶಬ್ದಗಳಿಂದ ನಿಂದಿಸುವ ಜತೆಗೆ ನನ್ನ ಮೇಲೆ ಅತ್ಯಾಚಾರ ಎಸಗಿದರು” ಎಂಬುದಾಗಿ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Rahul Gandhi: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಎಂದ ರಾಹುಲ್ ಗಾಂಧಿ; ಸಂಸತ್ತಲ್ಲಿ ಗದ್ದಲ, ಸ್ಮೃತಿ ಇರಾನಿ ತಿರುಗೇಟು
“ನನ್ನ ಮೇಲೆ ಐದಾರು ಜನ ಅತ್ಯಾಚಾರ ಎಸಗಿದ್ದಾರೆ ಎಂಬುದು ಜನರಿಗೆ ಗೊತ್ತಾದರೆ ಯಾರು ಏನು ಹೇಳುತ್ತಾರೋ, ನನ್ನ ಮಕ್ಕಳನ್ನು ಹೇಗೆ ನಿಂದಿಸುತ್ತಾರೋ, ಸಮಾಜ ನಮ್ಮನ್ನು ಹೇಗೆ ಪರಿಗಣಿಸುತ್ತದೆಯೋ ಎಂಬ ಭಯದಿಂದ ಇಷ್ಟು ದಿನ ಯಾರಿಗೂ ಈ ವಿಷಯ ಹೇಳಿರಲಿಲ್ಲ” ಎಂಬುದಾಗಿ ಮಹಿಳೆ ತಿಳಿಸಿದ್ದಾರೆ. ಮಣಿಪುರದಲ್ಲಿ ಮೇ 3ರಿಂದ ಹಿಂಸಾಚಾರ ಭುಗಿಲೆದ್ದಿದ್ದು, ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅವರನ್ನು ಮೆರವಣಿಗೆ ಮಾಡಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಈ ಪ್ರಕರಣವು ಸಂಸತ್ ಕಲಾಪಗಳಲ್ಲಿ ಚರ್ಚೆ, ಗಲಾಟೆಗೆ ಕಾರಣವಾಗುತ್ತಲೇ ಇದೆ. ಪ್ರತಿಪಕ್ಷಗಳು ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಸುದ್ದಿಯಾಗಿದೆ.