ಇಂಫಾಲ: ಮಣಿಪುರದಲ್ಲಿ ಕಳೆದ 60 ದಿನಗಳಿಂದ ಹಿಂಸಾಚಾರ ನಡೆಯುತ್ತಿದ್ದರೂ, ಅದನ್ನು ತಡೆಯುವಲ್ಲಿ ವಿಫಲರಾದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ (Biren Singh) ಅವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಮಣಿಪುರ ರಾಜ್ಯಪಾಲೆ ಅನುಸೂಯಾ ಉಯಿಕೆ ಅವರನ್ನು ಎನ್. ಬಿರೇನ್ ಸಿಂಗ್ ಅವರು ಕೆಲವೇ ನಿಮಿಷಗಳಲ್ಲಿ ಭೇಟಿ ಮಾಡಲಿದ್ದು, ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಣಿಪುರದಲ್ಲಿ ಕಳೆದ 60 ದಿನಗಳಿಂದ ಹಿಂಸಾಚಾರ ನಡೆಯುತ್ತಿದೆ. ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ವಿಚಾರದ ಕಾರಣಕ್ಕೆ ಭುಗಿಲೆದ್ದಿರುವ ಸಂಘರ್ಷವು 120ಕ್ಕೂ ಅಧಿಕ ನಾಗರಿಕರನ್ನು ಬಲಿ ಪಡೆದಿದೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಇನ್ನು ಪ್ರತಿಪಕ್ಷಗಳು ಮಣಿಪುರ ಹಿಂಸಾಚಾರವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಇಷ್ಟಾದರೂ, ಹಿಂಸೆಯನ್ನು ನಿಗ್ರಹಿಸುವಲ್ಲಿ ಹಿನ್ನಡೆಯಾಗಿದೆ. ಇದರ ಹೊಣೆ ಹೊತ್ತು ರಾಜೀನಾಮೆ ನೀಡಲು ಬಿರೇನ್ ಸಿಂಗ್ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ನೀಡದಂತೆ ಒತ್ತಾಯ
ಮಧ್ಯಾಹ್ನ 3 ಗಂಟೆಗೆ ಬಿರೇನ್ ಸಿಂಗ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ಬಿರೇನ್ ಸಿಂಗ ಬೆಂಬಲಿಗರು ರಾಜೀನಾಮೆ ನೀಡದಂತೆ ಆಗ್ರಹಿಸಿದ್ದಾರೆ. ಇಂಫಾಲದಲ್ಲಿರುವ ಬಿರೇನ್ ಸಿಂಗ್ ನಿವಾಸದ ಎದುರು ನೂರಾರು ಮಹಿಳೆಯರು ಸೇರಿದ್ದು, ಮಾನವ ಸರಪಳಿ ನಿರ್ಮಿಸುವ ಮೂಲಕ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Manipur Violence: ಮಹಿಳೆಯರು ಸೈನಿಕರಿಗೆ ಅಡ್ಡ ನಿಂತು 12 ಉಗ್ರರನ್ನು ಬಿಡಿಸಿಕೊಂಡು ಹೋದರು, ಅರಾಜಕತೆಯತ್ತ ಮಣಿಪುರ
ರಾಷ್ಟ್ರಪತಿ ಆಡಳಿತ ಜಾರಿ?
ಹೆಚ್ಚಿನ ಜನ ಸೇರುತ್ತಿರುವ ಕಾರಣಕ್ಕಾಗಿ ಬಿರೇನ್ ಸಿಂಗ್ ನಿವಾಸದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಸೇರಿ ಯಾವುದೇ ಕ್ರಮ ತೆಗೆದುಕೊಂಡರೂ ಹಿಂಸಾಚಾರ ತಹಬಂದಿಗೆ ಬಾರದ ಕಾರಣ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.