Site icon Vistara News

Manipur Violence: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸೆ, ಮೂವರ ಸಾವು

manipur violence

ಇಂಫಾಲ: ಮಣಿಪುರದಲ್ಲಿ ಮತ್ತೆ ಹಿಂಸೆ (Manipur Violence) ಭುಗಿಲೆದ್ದಿದೆ. ಶುಕ್ರವಾರ ತಡರಾತ್ರಿ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಹಿಂಸಾಚಾರದ ತಾಜಾ ಘಟನೆಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.

ಮೃತರು ಕ್ವಾಕ್ಟಾ ಪ್ರದೇಶದ ಮೈತಿ ಸಮುದಾಯದವರು ಎಂದು ವರದಿಯಾಗಿದೆ. ಕುಕಿ ಸಮುದಾಯದ ಹಲವಾರು ಮನೆಗಳು ಸಹ ಸುಟ್ಟುಹೋಗಿವೆ. ಬಿಷ್ಣುಪುರ ಜಿಲ್ಲೆಯ ಕ್ವಾಕ್ಟಾ ಪ್ರದೇಶದಲ್ಲಿ ಕುಕಿ ಸಮುದಾಯ ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯಿತು. ಮಣಿಪುರ ಪೊಲೀಸರು ಮತ್ತು ಕಮಾಂಡೋಗಳು ಪ್ರತಿದಾಳಿ ನಡೆಸಿದರು.

ಗುಂಡಿನ ದಾಳಿಯಲ್ಲಿ ಮಣಿಪುರದ ಒಬ್ಬ ಕಮಾಂಡೋ ತಲೆಗೆ ಗಾಯವಾಗಿದೆ. ಬಿಷ್ಣುಪುರದಲ್ಲಿ ಪರಿಸ್ಥಿತಿ ಸಾಕಷ್ಟು ಗಂಭೀರವಾಗಿದೆ ಎನ್ನಲಾಗಿದ್ದು, ಆ ಪ್ರದೇಶದಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಕೆಲವು ದುಷ್ಕರ್ಮಿಗಳು ಬಫರ್ ಝೋನ್ ದಾಟಿ ಮೈತಿ ಪ್ರದೇಶಗಳಿಗೆ ಬಂದು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕ್ವಾಕ್ಟಾ ಪ್ರದೇಶದಿಂದ 2 ಕಿ.ಮೀಗಿಂತಲೂ ಹೆಚ್ಚು ದೂರದಲ್ಲಿ ಕೇಂದ್ರೀಯ ಪಡೆಗಳ ಮೂಲಕ ಬಫರ್ ವಲಯವನ್ನು ರಕ್ಷಿಸಲಾಗಿದೆ. ಪೊಲೀಸ್ ಪಡೆಗಳು ಸ್ಥಳದಲ್ಲಿವೆ.

ಗುರುವಾರ ಬಿಷ್ಣುಪುರ್ ಜಿಲ್ಲೆಯಲ್ಲಿ ಸಶಸ್ತ್ರ ಪಡೆಗಳು ಮತ್ತು ಮೈತಿ ಸಮುದಾಯದ ಪ್ರತಿಭಟನಾಕಾರರ ನಡುವೆ ಹೊಸದಾಗಿ ಘರ್ಷಣೆ ಭುಗಿಲೆದ್ದಿತು. ಘರ್ಷಣೆಯಲ್ಲಿ 17 ಜನರು ಗಾಯಗೊಂಡರು. ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಸಶಸ್ತ್ರ ಪಡೆಗಳು ಮತ್ತು ಮಣಿಪುರ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಈ ಘಟನೆಯಿಂದಾಗಿ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದಲ್ಲಿ ಹಿಂದೆಗೆದುಕೊಳ್ಳಲಾಗಿದ್ದ ಕರ್ಫ್ಯೂಗಳನ್ನು ಮತ್ತೆ ಬಿಗಿಗೊಳಿಸಲಾಯಿತು.

ಸುಮಾರು ಮೂರು ತಿಂಗಳಿನಿಂದ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಅಂದಿನಿಂದ ಇಂದಿನವರೆಗೆ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಸಂಘಟನೆಗಳು ಮೆರವಣಿಗೆ ಆಯೋಜಿಸಿದ ಬಳಿಕ ಮೇ 3ರಂದು ಹಿಂಸಾಚಾರ ಭುಗಿಲೆದ್ದಿತ್ತು. ಆ ಸಂದರ್ಭದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ರೇಪ್‌ ಮಾಡಲಾಗಿತ್ತ. ಇದರ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿತ್ತು.

ಇದನ್ನೂ ಓದಿ: Manipur Violence: ಶಾಲೆಗೆಂದು ಹೋದ 30 ಮಕ್ಕಳು ಮನೆಗೆ ಬರಲೇ ಇಲ್ಲ; ‘ಮಣಿಪುರ ಫೈಲ್ಸ್‌’ ಬಗೆದಷ್ಟೂ ಕರಾಳ

Exit mobile version