Site icon Vistara News

Manipur Violence: ಮಹಿಳೆಯರ ಬೆತ್ತಲೆ ಮೆರವಣಿಗೆ; ವಿಡಿಯೊ ಡಿಲೀಟ್‌ ಮಾಡಲು ಟ್ವಿಟರ್‌ಗೆ ಸೂಚನೆ, ಮೌನ ಮುರಿದ ಮೋದಿ

Manipur Violence

Police Officer Shot Dead by Militants in Manipur's Moreh

ಇಂಫಾಲ: ಮಣಿಪುರದಲ್ಲಿ ಕಾನೂನು-ಸುವ್ಯವಸ್ಥೆ, ಶಾಂತಿ ಸ್ಥಾಪನೆ ದಿನೇದಿನೆ ಮರೀಚಿಕೆಯಾಗುತ್ತಿದ್ದು, ಹಿಂಸಾಚಾರ ನಿಲ್ಲುವ (Manipur Violence) ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅದರಲ್ಲೂ, ಕಳೆದ ಮೇ ತಿಂಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅವರ ಮೆರವಣಿಗೆ ಮಾಡಲಾಗಿದೆ ಎನ್ನಲಾದ ವಿಡಿಯೊ ಈಗ ಹರಿದಾಡುತ್ತಿದ್ದು, ಇದರಿಂದ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿದೆ. ಇದರ ಬೆನ್ನಲ್ಲೇ, ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ ಮಾಡಿ ಘಟನೆಯ ಮಾಹಿತಿ ಪಡೆದಿದ್ದಾರೆ. ಹಾಗೆಯೇ, ವೈರಲ್‌ ಆಗಿರುವ ವಿಡಿಯೊ ಡಿಲೀಟ್‌ ಮಾಡುವಂತೆ ಟ್ವಿಟರ್‌ಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಬುಡಕಟ್ಟು ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೈ ಕಿಡಿಗೇಡಿಗಳ ಗುಂಪು ಬೆತ್ತಲೆ ಮೆರವಣಿಗೆ ಮಾಡಿದ್ದು, ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬುಡಕಟ್ಟು ಸಮುದಾಯ ಆರೋಪ ಮಾಡಿದೆ. ಈ ವಿಡಿಯೋ ಕುಕೀಗಳಲ್ಲಿ ಆಕ್ರೋಶ ಕೆರಳಿಸಿದ್ದು, ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ನಾಂದಿಯಾಗಿದೆ. ಎರಡೂ ಸಮುದಾಯಗಳ ಮಧ್ಯೆ ಈಗ ಮತ್ತೆ ಹಿಂಸಾಚಾರ ಶುರುವಾಗಿದೆ.

ಸಿಎಂಗೆ ಶಾ ಕರೆ, ಟ್ವಿಟರ್‌ಗೆ ಆದೇಶ

ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರಿಗೆ ಅಮಿತ್‌ ಶಾ ಕರೆ ಮಾಡಿದ್ದು, ಘಟನೆಯ ಇಡೀ ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಹಿಂಸಾಚಾರ ಭುಗಿಲೇಳದಂತೆ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿಯೂ ಅಮಿತ್‌ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಹಿಂಸಾಚಾರ ಹೆಚ್ಚಾಗಲು ಹಳೆಯ ವಿಡಿಯೊ ಕಾರಣವಾದ ಹಿನ್ನೆಲೆಯಲ್ಲಿ ವಿಡಿಯೊ ತೆರವುಗೊಳಿಸಬೇಕು ಎಂದು ಟ್ವಿಟರ್‌ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಪ್ರಮುಖ ಆರೋಪಿಯ ಬಂಧನ

ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೊ ವೈರಲ್‌ ಆಗುತ್ತಲೇ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಖುರಿಯೆಮ್‌ ಹೆರೊ ದಾಸ್ (Khuriem Hero Das)‌ ಎಂದು ಗುರುತಿಸಲಾಗಿದ್ದು, ಇನ್ನೂ ಹಲವು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ಖಂಡಿಸಿದ ಮೋದಿ

ಮಣಿಪುರದಲ್ಲಿ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. “ಇದು ಇಡೀ ದೇಶವೇ ತಲೆ ತಗ್ಗಿಸುವಂತಹ ಘಟನೆ. ಈ ಪ್ರಕರಣವು ನನ್ನ ಮನಸ್ಸನ್ನು ಕಲ್ಲವಿಲಗೊಳಿಸಿದೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರು ಇದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಮುಖ್ಯಮಂತ್ರಿಗೆ ಸೂಚಿಸಿದ್ದೇನೆ” ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್‌ ನಟರಿಂದಲೂ ಆಕ್ರೋಶ

ಮಣಿಪುರ ಹಿಂಸಾಚಾರದ ಕುರಿತು ಬಾಲಿವುಡ್‌ ನಟ-ನಟಿಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಕೃತ್ಯವು ಮನಸ್ಸನ್ನು ನಲುಗಿಸಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ನಟ ಅಕ್ಷಯ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. ಹಾಗೆಯೇ, ನಟಿ ರಿಚಾ ಛಡ್ಡಾ ಅವರು ಕೂಡ ಘಟನೆಯನ್ನು ಖಂಡಿಸಿದ್ದಾರೆ.

ಸತತ ಎರಡು ತಿಂಗಳುಗಳಿಂದ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ 2 ತಿಂಗಳಿಂದ ಮುಚ್ಚಿದ್ದ ಶಾಲೆಗಳು ಇತ್ತೀಚೆಗಷ್ಟೇ ಪುನಾರಂಭವಾಗಿತ್ತು. ಸತತ ಪ್ರಯತ್ನಗಳ ಬಳಿಕ ಸುದೀರ್ಘ ಹಿಂಸಾಚಾರ ತಣ್ಣಗಾಗಿತ್ತು. ಇದೀಗ ಈ ಭೀಕರ ಘಟನೆ ವಿಡಿಯೋ ಬಹಿರಂಗೊಂಡಿರುವುದು ಬುಡಕಟ್ಟು ಸಮುದಾಯಗಳನ್ನು ಮತ್ತಷ್ಟು ಕೆರಳಿಸಿದೆ.

ಇದನ್ನೂ ಓದಿ: Manipur violence: ಮಣಿಪುರದಲ್ಲಿ ಅಮಾನುಷ ಘಟನೆ; ಇಬ್ಬರು ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಮುನ್ನೆಲೆಗೆ, ಭುಗಿಲೆದ್ದ ಆಕ್ರೋಶ

ಇತ್ತೀಚೆಗೆ ಸುಪ್ರೀಂ ಕೋರ್ಟ್, ಮಣಿಪುರ ಹಿಂಸಾಚಾರ ಕುರಿತು ವಿಚಾರಣೆ ನಡೆಸಿತ್ತು. ‘ಮಣಿಪುರದಲ್ಲಿ ಮತ್ತಷ್ಟು ಕಿಚ್ಚು ಹಚ್ಚಲು ಸುಪ್ರೀಂ ಕೋರ್ಟನ್ನು ವೇದಿಕೆ ಆಗಿ ಬಳಸಿಕೊಳ್ಳಬೇಡಿ’ ಎಂದು ಸರ್ವೋಚ್ಚ ನ್ಯಾಯಾಲಯವು, 2 ತಿಂಗಳಿಂದ ಜನಾಂಗೀಯ ಸಂಘರ್ಷದಲ್ಲಿ ತೊಡಗಿರುವ ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಮತ್ತೆ ಗಲಭೆ ಸೂಚನೆಗಳು ವ್ಯಕ್ತವಾಗುತ್ತಿವೆ. ಮಣಿಪುರದ ವಸ್ತುಸ್ಥಿತಿ ವರದಿ ಸಲ್ಲಿಸಿದ ರಾಜ್ಯ ಸರ್ಕಾರ, 142 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. 5,995 ಎಫ್‌ಐಆರ್‌ ದಾಖಲಾಗಿದ್ದು, 6745 ಜನರನ್ನು ಬಂಧಿಸಲಾಗಿದೆ. 6 ಕೇಸುಗಳ ತನಿಖೆಯನ್ನು ಸಿಬಿಐ ನಡೆಸುತ್ತಿದೆ ಎಂದು ಹೇಳಿತ್ತು.

Exit mobile version