Site icon Vistara News

Manipur Violence: ಮಣಿಪುರ ಮತ್ತೆ ಉದ್ವಿಗ್ನ; ಇಂಫಾಲ ಡಿಸಿ ಕಚೇರಿ ಧ್ವಂಸ, ವಾಹನಗಳು ಭಸ್ಮ

Manipur Violence

Police Officer Shot Dead by Militants in Manipur's Moreh

ಇಂಫಾಲ: ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತೈ ಸಮುದಾಯದ ಇಬ್ಬರು ವಿದ್ಯಾರ್ಥಿಗಳ ಶವಗಳ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಲೇ ಮಣಿಪುರದಲ್ಲಿ ಮತ್ತೆ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಅದರಲ್ಲೂ, ಇಂಫಾಲದ ಜಿಲ್ಲಾಧಿಕಾರಿ ಕಚೇರಿಗೆ (Imphal DC Office) ನುಗ್ಗಿದ ಮೈತೈ ಸಮುದಾಯದ ಉದ್ರಿಕ್ತರು, ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಗುರುವಾರ (ಸೆಪ್ಟೆಂಬರ್‌ 28) ಬೆಳಗ್ಗೆಯೇ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ಉದ್ರಿಕ್ತರು, ಪೀಠೋಪಕರಣಗಳನ್ನೆಲ್ಲ ಪುಡಿಗಟ್ಟಿದ್ದಾರೆ. ಹಾಗೆಯೇ, ಕಚೇರಿ ಎದುರಿದ್ದ ಎರಡು ಕಾರುಗಳಿಗೂ ಬೆಂಕಿ ಹಚ್ಚಿದ್ದಾರೆ.

ಬುಧವಾರ (ಸೆಪ್ಟೆಂಬರ್‌ 27) ರಾತ್ರಿಯಿಂದಲೇ ಮಣಿಪುರದ ಬಹುತೇಕ ಕಡೆ ಹಿಂಸಾಚಾರ ಭುಗಿಲೆದ್ದಿದೆ. ಉರಿಪೋಕ್‌, ಯೈಸ್ಕುಲ್‌, ಸಗೋಲ್‌ಬಂದ್‌ ಹಾಗೂ ತೆರಾ ಪ್ರದೇಶಗಳಲ್ಲಿ ಉದ್ರಿಕ್ತ ಗುಂಪುಗಳು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದಾರೆ. ರಸ್ತೆ ತಡೆ ನಡೆಸಿ, ವಾಹನಗಳು, ಟೈರ್‌ಗಳಿಗೆ ಬೆಂಕಿ ಹಚ್ಚಿ, ಭದ್ರತಾ ಸಿಬ್ಬಂದಿಗೆ ಅಡ್ಡ ನಿಂತು ಉಪಟಳ ಮಾಡಿದ್ದಾರೆ. ಇದರಿಂದಾಗಿ ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಾನಿರತರ ಮಧ್ಯೆ ವಾಗ್ವಾದ ನಡೆದಿದೆ. ಅಲ್ಲದೆ, ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿಯು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ತಿಳಿದುಬಂದಿದೆ.

ಮಣಿಪುರದ ಸುಮಾರು 65 ಕಡೆ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಇಬ್ಬರು ವಿದ್ಯಾರ್ಥಿಗಳ ಶವ ಪತ್ತೆ ಬಳಿಕ ಮೈತೈ ಸಮುದಾಯದವರು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಮೈತೈ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ಕುಳಿತಿರುವುದು ಫೋಟೊದಲ್ಲಿ ಕಂಡುಬರುತ್ತಿದೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್‌ ಶರ್ಟ್ ಧರಿಸಿರುವುದು ಕಂಡುಬಂದಿದೆ. ಅವರ ಹಿಂದೆ ಬಂದೂಕುಗಳನ್ನು ಹೊಂದಿರುವ ಇಬ್ಬರು ಪುರುಷರು ಸ್ಪಷ್ಟವಾಗಿ ಗೋಚರಿಸುತ್ತಾರೆ. ಇನ್ನೊಂದು ಫೋಟೊದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡುಬರುತ್ತಿದೆ. ಇದರ ಹಿಂದೆ ಕುಕಿ ಸಮುದಾಯದ ಜನರ ಕೈವಾಡ ಇದೆ ಎಂದು ಮೈತೈ ಸಮುದಾಯದವರು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್;‌ ಮಣಿಪುರ ಮತ್ತೆ ಉದ್ವಿಗ್ನ?

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 180ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು.

Exit mobile version