Site icon Vistara News

Manipur Violence: ಮಣಿಪುರದಲ್ಲಿ ಪೊಲೀಸ್‌ ಅಧಿಕಾರಿಯ ಹತ್ಯೆ; ‘ಕುಕಿ’ ಜನರಿಂದ ದಾಳಿ

Manipur SDPO Shot Dead

Manipur Violence: Moreh SDPO Chingtham Anand shot dead in suspected Kuki militant ambush

ಇಂಫಾಲ: ಕಳೆದ ಆರೇಳು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ (Manipur Violence) ನಡೆಯುತ್ತಿದ್ದು, ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಅದರಲ್ಲೂ, ಕುಕಿ ಹಾಗೂ ಮೈತೈ ಸಮುದಾಯಗಳ ನಡುವಿನ ಸಂಘರ್ಷವು ಸಾಮಾನ್ಯ ಜನ ಬಿಡಿ ಯೋಧರ ಮೇಲೆಯೂ ದಾಳಿ ಮಾಡಿದ ನಿದರ್ಶನಗಳಿವೆ. ಇದಕ್ಕೆ ನಿದರ್ಶನ ಎಂಬಂತೆ, ಕುಕಿ ಸಮುದಾಯದ ಉದ್ರಿಕ್ತರು ಮಣಿಪುರದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರನ್ನು (Police Officer) ಹತ್ಯೆಗೈದಿದ್ದಾರೆ.

ಮಣಿಪುರದ ತೆಂಗ್ನೌಪಾಲ್‌ ಜಿಲ್ಲೆಯ ಮೊರೇಹ್‌ನಲ್ಲಿ ಕುಕಿ ಬಂಡುಕೋರರು ಸಬ್‌-ಡಿವಿಷನಲ್‌ ಪೊಲೀಸ್‌ ಆಫೀಸರ್‌ (SDPO) ಚಿಂಗ್‌ಥಾಮ್‌ ಆನಂದ್‌ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕುಕಿ ಸಮುದಾಯದ ಸ್ನೈಪರ್‌ (Sniper) ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬೆಳಗ್ಗೆ 9 ಗಂಟೆಯ ಸುಮಾರಿಗೆ ಗುಂಡಿನ ದಾಳಿ ನಡೆದಿದ್ದು, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಹೆಲಿಕಾಪ್ಟರ್‌ ಒಂದರ ಲ್ಯಾಂಡಿಂಗ್‌ ಹಿನ್ನೆಲೆಯಲ್ಲಿ ಪೊಲೀಸರ ತಂಡವು ಮೈದಾನವೊಂದರಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿತ್ತು. ಇದೇ ವೇಳೆ ಕುಕಿ ಉದ್ರಿಕ್ತರ ಗುಂಪು ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಮಣಿಪುರದಲ್ಲಿ ನಡೆಯುತ್ತಿರುವ ಸುದೀರ್ಘ ಹಿಂಸಾಚಾರಕ್ಕೆ ವಿದೇಶಿ ಉಗ್ರನ ಪಿತೂರಿ ಇದೆ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎನ್‌ಐಎ, ಒಬ್ಬ ಶಂಕಿತನನ್ನು ಬಂಧಿಸಿದೆ.

ಮಣಿಪುರದ ಚುರಚಂದ್‌ಪುರದಲ್ಲಿ ಸೈಮಿನ್‌ಲುನ್‌ ಗಾಂಗ್ಟೆ ಎಂಬ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಮಣಿಪುರದಲ್ಲಿ ಎರಡು ಬುಡಕಟ್ಟು ಗುಂಪುಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದ ಲಾಭ ಪಡೆದು, ಇನ್ನಷ್ಟು ಗಲಭೆ ಹೆಚ್ಚಿಸಿ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಈತ ಸಂಚು ರೂಪಿಸಿದ್ದ. ಇದಕ್ಕಾಗಿ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನಲ್ಲಿರುವ ಉಗ್ರರ ಜತೆ ಸಂಪರ್ಕ ಹೊಂದಿದ್ದ. ಅವರ ನೆರವಿನೊಂದಿಗೆ ಭಾರತದಲ್ಲಿ ಗಲಭೆ, ಹಿಂಸೆ ಹೆಚ್ಚಿಸುವುದು ಈತನ ಉದ್ದೇಶವಾಗಿತ್ತು ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 180ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಮಣಿಪುರದಲ್ಲಿ ಶಾಂತಿಸ್ಥಾಪನೆಯ ಭರವಸೆ ನೀಡಿದ್ದರು.

ಇದನ್ನೂ ಓದಿ: Manipur Horror: ಮಣಿಪುರ ವಿದ್ಯಾರ್ಥಿಗಳ ಭೀಕರ ಹತ್ಯೆ; ನಾಲ್ವರನ್ನು ಬಂಧಿಸಿದ ಸಿಬಿಐ, ಇಬ್ಬರು ವಶಕ್ಕೆ

Exit mobile version