Site icon Vistara News

ಮಣಿಪುರ ಹಿಂಸಾಚಾರ; ಶಸ್ತ್ರಾಸ್ತ್ರ ಲೂಟಿ ಮಾಡಲು ಯತ್ನಿಸಿದ ಗಲಭೆಕೋರರನ್ನು ಓಡಿಸಿದ ಸೇನೆ, ಒಬ್ಬನ ಹತ್ಯೆ

Indian Army

ಮಣಿಪುರದಲ್ಲಿ ಹಿಂಸಾಚಾರ (Manipur Violence), ದರೋಡೆ, ಲೂಟಿ ಮುಂದುವರಿಯುತ್ತಿದೆ. ಸೈನಿಕರು, ರಕ್ಷಣಾ ಸಿಬ್ಬಂದಿ ಮೇಲೆಲ್ಲ ಬಂಡುಕೋರರು ದಾಳಿ ಮಾಡುತ್ತಿದ್ದಾರೆ. ಅವರ ಬಳಿ ಇರುವ ಶಸ್ತ್ರಾಸ್ತ್ರಗಳನ್ನೇ ಲೂಟಿ ಹೊಡೆದು, ಅದನ್ನೆಲ್ಲ ಗಲಭೆಗೆ ಬಳಸಿಕೊಳ್ಳುತ್ತಿದ್ದಾರೆ. ಹಾಗೇ, ಮಂಗಳವಾರ ಭಾರತೀಯ ಮೀಸಲು ಬೆಟಾಲಿಯನ್​ ಪಡೆಯ ಮೇಲೆ ಗಲಭೆಕೋರರ ಗುಂಪೊಂದು ದಾಳಿ ಮಾಡಿ, ಅವರ ಕೈಯಲ್ಲಿದ್ದ, ಕ್ಯಾಂಪ್​​ಗಳಲ್ಲಿ ಇದ್ದ ಶಸ್ತ್ರಾಸ್ತ್ರಗಳನ್ನು (Indian Reserve Battalion (IRB)) ಲೂಟಿ ಹೊಡೆಯಲು ಯತ್ನಿಸಿದೆ. ಆದರೆ ಅದನ್ನು ಭದ್ರತಾ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ಇದೇ ವೇಳೆ ಗಲಭೆಕೋರರು ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷ ಮಿತಿಮೀರಿ, ಒಬ್ಬ ಪುಂಡನ ಹತ್ಯೆಯಾಗಿದೆ.

ಈ ಘಟನೆ ನಡೆದಿದ್ದು ಮಣಿಪುರದ ತ್ರೌಬಲ್ ಜಿಲ್ಲೆಯಲ್ಲಿ. ಸುಮಾರು 100 ಜನ ಪ್ರತಿಭಟನಾಕಾರರು ಗುಂಪಾಗಿ ಬಂದು ಭದ್ರತಾ ಪಡೆಯನ್ನು ತಡೆದಿದ್ದರು. ಬಹುತೇಕ ಕಡೆಗಳಲ್ಲಿ ಇವರು ಭದ್ರತಾ ಪಡೆ ಸಿಬ್ಬಂದಿಗೆ ತಡೆಯೊಡ್ಡುತ್ತಿದ್ದಾರೆ. ಇವರು ಸಂಚರಿಸುವ ಮಾರ್ಗದಲ್ಲೆಲ್ಲ ರಸ್ತೆ ತಡೆ ನಡೆಸುತ್ತಿದ್ದಾರೆ. ಹಾಗಿದ್ದಾಗ್ಯೂ ಅಸ್ಸಾಂ ರೈಫಲ್ಸ್​ ಮತ್ತು ಕ್ಷಿಪ್ರ ಕ್ರಿಯಾ ಪಡೆ ಯೋಧರು ಬಂಡುಕೋರರನ್ನು ಯಶಸ್ವಿಯಾಗಿ ನಿಯಂತ್ರಣ ಮಾಡುತ್ತಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.

ಇದನ್ನೂ ಓದಿ: ನಿಯಂತ್ರಣಕ್ಕೆ ಬಾರದ ಮಣಿಪುರ ಹಿಂಸಾಚಾರ; ಮತ್ತೆ ಫೈರಿಂಗ್​, 24 ಗಂಟೆಯಲ್ಲಿ 9 ಜನರ ಸಾವು

ಮಣಿಪುರದಲ್ಲಿ ಮೈತೈ ಸಮುದಾಯದವರಿಗೆ ಎಸ್​ಟಿ ಸ್ಥಾನಮಾನ ಕೊಡಬೇಕು ಎಂಬ ವಿಷಯದಿಂದ ಶುರುವಾದ ಹಿಂಸಾಚಾರ ಇದೀಗ ಹಲವು ಮಗ್ಗಲುಗಳನ್ನು ಪಡೆದುಕೊಂಡಿದೆ. ಯಾವ ವಿಷಯಕ್ಕೆ ಅಲ್ಲಿ ಈ ಪರಿಯ ಹಿಂಸಾಚಾರವಾಗುತ್ತಿದೆ ಎಂಬುದೇ ಅರ್ಥವಾಗದಂತೆ ಆಗಿದೆ. ಮಣಿಪುರ ಹಿಂಸಾಚಾರದಲ್ಲಿ ಚೀನಾ ಕೈವಾಡವಿದೆ ಎಂಬ ಆರೋಪ ಪ್ರತಿಪಕ್ಷಗಳ ವಲಯದಿಂದ ಬರುತ್ತಿದೆ. ಇಡೀ ರಾಜ್ಯ ಹೊತ್ತಿ ಉರಿಯುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೆ ಸುಮಾರು 326 ಜನರನ್ನು ಬಂಧಿಸಲಾಗಿದೆ.

Exit mobile version