ಇಂಫಾಲ: ಮಣಿಪುರ ಹೊತ್ತಿ ಉರಿಯುತ್ತಿದೆ. ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ವಿಚಾರದ ಕಾರಣಕ್ಕೆ ಭುಗಿಲೆದ್ದಿರುವ ಸಂಘರ್ಷವು (Manipur Violence) ಹಿಂಸಾಚಾರಕ್ಕೆ ತಿರುಗಿದೆ. ಸಿಕ್ಕ ಸಿಕ್ಕ ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚುವುದು, ಹಲ್ಲೆ ನಡೆಸುವುದು ಸೇರಿ ಹಲವು ರೀತಿಯಲ್ಲಿ ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಹಿಂಸಾಚಾರದ ಬಿಸಿ ಜನಪ್ರತಿನಿಧಿಗಳಿಗೂ ತಾಕಿದ್ದು, ಮಣಿಪುರ ರಾಜ್ಯ ಸಚಿವೆ ನೆಮ್ಚಾ ಕಿಪ್ಗೆನ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ, ದುಷ್ಕರ್ಮಿಗಳು ಕೇಂದ್ರ ಸಚಿವ ಆರ್.ಕೆ. ರಂಜನ್ ಸಿಂಗ್ ಅವರ ಮನೆಗೂ ಬೆಂಕಿ ಹಚ್ಚಿದ್ದಾರೆ.
ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಆರ್.ಕೆ. ರಂಜನ್ ಸಿಂಗ್ ಅವರ ಇಂಫಾಲದಲ್ಲಿರುವ ನಿವಾಸಕ್ಕೆ ಗುರುವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸಚಿವರ ನಿವಾಸಕ್ಕೆ ಒಂಬತ್ತು ಸೆಕ್ಯುರಿಟಿ ಎಸ್ಕಾರ್ಟ್ ಸಿಬ್ಬಂದಿ, ಐವರು ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಎಂಟು ಹೆಚ್ಚುವರಿ ಗಾರ್ಡ್‌ಗಳು ಇದ್ದರೂ ದುಷ್ಕರ್ಮಿಗಳು ಸಚಿವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಇಂಫಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದಂತಾಗಿದೆ.
ಹೊತ್ತಿ ಉರಿದ ಮನೆ
Manipur: A mob burnt down #BJP leader and Union Minister of State for External Affairs #RKRanjanSingh's residence at Kongba in #Imphal on Thursday late night.#ManipurBurning #Manipur pic.twitter.com/bFa76GyHNA
— Amitabh Chaudhary (@MithilaWaala) June 16, 2023
“ಗುರುವಾರ ರಾತ್ರಿ ನೂರಾರು ಜನ ಏಕಕಾಲಕ್ಕೆ ಮನೆಗೆ ನುಗ್ಗಿದರು. ಅವರು ಎಲ್ಲ ಕಡೆಯಿಂದಲೂ ಪೆಟ್ರೋಲ್ ಬಾಂಬ್ ಎಸೆದರು. ಮನೆಯ ಪ್ರಮುಖ ಗೇಟ್ ಸೇರಿ ಸುತ್ತಲೂ ನೆರೆದಿದ್ದ ಜನ ಪೆಟ್ರೋಲ್ ಬಾಂಬ್ ಎಸೆದರು. ಇದರಿಂದಾಗಿ ಎಷ್ಟು ಭದ್ರತಾ ಸಿಬ್ಬಂದಿ ಇದ್ದರೂ ಜನರನ್ನು ತಡೆಯಲು ಆಗಲಿಲ್ಲ. ಹಾಗಾಗಿ, ಮನೆ ಹೊತ್ತಿ ಉರಿಯುವಂತಾಯಿತು” ಎಂದು ಎಸ್ಕಾರ್ಟ್ ಕಮಾಂಡರ್ ಎಲ್. ದಿನೇಶ್ವರ್ ಸಿಂಗ್ ಮಾಹಿತಿ ನೀಡಿದರು. ಆದಾಗ್ಯೂ, ಮನೆಯಲ್ಲಿದ್ದ ಯಾರಿಗೂ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.
ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನ ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನೂ ರಚಿಸಲಾಗಿದೆ. ಅಲ್ಲಿ ರಾಜ್ಯ ಪೊಲೀಸರು, ಕೇಂದ್ರ ಸಶಸ್ತ್ರ ಪಡೆಗಳು, ಮಿಲಿಟರಿ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಷ್ಟಾದರೂ ಪ್ರತಿಭಟನೆ ನಿಲ್ಲುತ್ತಿಲ್ಲ. ಒಂದು ಸಲ ತಹಬದಿಗೆ ಬಂದಂತೆ ಕಂಡರೂ ಮತ್ತೆಮತ್ತೆ ಅಲ್ಲಲ್ಲಿ ಹಿಂಸಾಚಾರ ನಡೆಯುತ್ತಿದೆ.
ಇದನ್ನೂ ಓದಿ: ಮಣಿಪುರ ಸಚಿವೆ ಮನೆಗೂ ಬೆಂಕಿ ಇಟ್ಟ ಪ್ರತಿಭಟನಾಕಾರರು; ರಾಜ್ಯವನ್ನು ‘ಉರಿ’ಸುತ್ತಿದ್ದಾರೆ ಮೈತೈ-ಕುಕಿಗಳು
ಮಂಗಳವಾರ ಖಾಮೇನ್ಲೋಕ್ ಏರಿಯಾದಲ್ಲಿ ಹೊಸದಾಗಿ ಫೈರಿಂಗ್ ನಡೆದಿತ್ತು. 9 ಮಂದಿ ಮೃತಪಟ್ಟು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲ, ಗಲಭೆಕೋರರು ಆ ಹಳ್ಳಿಯ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಇದುವರೆಗೆ 100 ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, 300ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಬಂಡುಕೋರರ ಅಟ್ಟಹಾಸ ಮುಂದುವರಿದಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ