ನವದೆಹಲಿ: ಅಬಕಾರಿ ನೀತಿ ಜಾರಿಯಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ೩೧ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ, ಸತತ ವಿಚಾರಣೆ, ದಾಖಲೆ ಪರಿಶೀಲನೆ ಸೇರಿ ಹಲವು ವಿಚಾರಣೆಗಳ ಬಳಿಕ ದೆಹಲಿ ಉಪ ಮುಖ್ಯಮಂತ್ರಿ, ಅಬಕಾರಿ ಸಚಿವ ಮನೀಷ್ ಸಿಸೋಡಿಯಾ (Manish Sisodia) ಅವರನ್ನು ಬಂಧಿಸಲಾಗಿದೆ. ಭಾನುವಾರವೇ ಸತತ ಎಂಟು ಗಂಟೆ ವಿಚಾರಣೆ ನಡೆಸಿದ್ದು, ಸಿಸೋಡಿಯಾ ನೀಡಿದ ಉತ್ತರಗಳು, ಸ್ಪಷ್ಟನೆಗಳು ಸಮಾಧಾನಕರ ಎನಿಸದ ಕಾರಣ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಏನಿದು ಹಗರಣ? ಇದರಲ್ಲಿ ಸಿಸೋಡಿಯಾ ಪಾತ್ರವೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಏನಿದು ಪ್ರಕರಣ?
ದೆಹಲಿ ಸರ್ಕಾರವು ೨೦೨೧ರಲ್ಲಿ ಜಾರಿಗೆ ತಂದ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇ.ಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಬೆಳಗಿನ ಜಾವ ಮೂರು ಗಂಟೆವರೆಗೆ ಬಾರ್‌ಗಳು ಓಪನ್ ಇರುವುದು, ಸುಲಭವಾಗಿ ಲೈಸೆನ್ಸ್ ನೀಡುವುದು ಸೇರಿ ಹಲವು ಕ್ರಮಗಳುಳ್ಳ ನೀತಿಯ ಜಾರಿ ವೇಳೆ ತಮಗೆ ಬೇಕಾದ ಡೀಲರ್‌ಗಳಿಗೆ ಲೈಸೆನ್ಸ್ ನೀಡಲು ಆಪ್ ೧೦೦ ಕೋಟಿ ರೂ. ಲಂಚ ಪಡೆದಿದೆ ಎಂಬುದು ಆರೋಪವಾಗಿದೆ. ಮನೀಷ್ ಸಿಸೋಡಿಯಾ ಅವರು ಅಬಕಾರಿ ಸಚಿವರಾದ ಕಾರಣ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸುವ ಜತೆಗೆ ಇದುವರೆಗೆ ಹಲವು ಬಾರಿ ವಿಚಾರಣೆ ನಡೆಸಲಾಗಿದೆ. ಈಗ ಕೊನೆಗೆ ಸಿಬಿಐ ಅಧಿಕಾರಿಗಳು ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ.
ಬಂಧನ ಬಳಿಕ ಕೇಜ್ರಿವಾಲ್ ಟ್ವೀಟ್
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಿಬಿಐ ವಿಚಾರಣೆ ಆರಂಭಿಸುವಾಗಲೇ ನನ್ನನ್ನು ಬಂಧಿಸಲಾಗುತ್ತದೆ ಎಂದು ಸಿಸೋಡಿಯಾ ಹೇಳಿದ್ದರು. ಆದರೆ, ಎರಡು ತಿಂಗಳು ಸಿಸೋಡಿಯಾ ಅವರನ್ನು ಸಿಬಿಐ ವಿಚಾರಣೆಗೂ ಕರೆದಿರಲಿಲ್ಲ. ಈಗ ವಿಚಾರಣೆಗೆ ಕರೆದು, ಸತತ ಎಂಟು ಗಂಟೆ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಹೆಸರೂ ಕೂಡ ಕೇಳಿಬಂದಿದೆ. ನೀತಿ ಜಾರಿಯಿಂದ ಸರ್ಕಾರಕ್ಕೆ ಸುಮಾರು ೨,೮೦೦ ಕೋಟಿ ರೂ. ನಷ್ಟವಾಗಿದೆ ಎಂದು ಇ.ಡಿ ತಿಳಿಸಿದೆ.
ರಾಜಕೀಯ ಮೇಲಾಟ ದ್ವಿಗುಣ
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಇದಕ್ಕೂ ಮೊದಲು ವಿಚಾರಣೆ ನಡೆಸಿದಾಗಿನಿಂದ ಹಿಡಿದು ಇದುವರೆಗೆ ಆಪ್ ಹಾಗೂ ಬಿಜೆಪಿ ಮಧ್ಯೆ ರಾಜಕೀಯ ಮೇಲಾಟ ನಡೆಯುತ್ತಿತ್ತು. ಈಗ ಸಿಸೋಡಿಯಾ ಬಂಧನದ ಬಳಿಕ ಅದು ದ್ವಿಗುಣವಾಗಿದೆ. ಸಿಸೋಡಿಯಾ ಬಂಧನವು ಪ್ರಜಾಪ್ರಭುತ್ವಕ್ಕೆ ಕರಾಳ ದಿನ ಎಂದು ಆಪ್ ಜರಿದಿದೆ. ಹಾಗೆಯೇ, ಆಪ್ ಪ್ರತಿಭಟನೆಯ ಭೀತಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಬಿಜೆಪಿ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Manish Sisodia Arrested: ಅಬಕಾರಿ ನೀತಿ ಹಗರಣ, ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಬಂಧನ