ನವದೆಹಲಿ: ನೂತನ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣದಲ್ಲಿ (Excise Policy Case) ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ (Manish Sisodia) ಅವರಿಗೆ ಸಿಬಿಐ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಇದರ ಬೆನ್ನಲ್ಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ೧೨ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆಸಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಕ್ಸೇನಾ ಅವರು ೧೧ ಐಎಎಸ್ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಿದ್ದರು. ಈಗ ಮನೀಷ್ ಸಿಸೋಡಿಯಾ ನಿವಾಸ ಸೇರಿ ಹಲವೆಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಅದರಲ್ಲೂ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ವಿಶೇಷ ಕಾರ್ಯದರ್ಶಿ ಉದಿತ್ ಪ್ರಕಾಶ್ ರೈ ಅವರೂ ವರ್ಗಾವಣೆಗೊಂಡಿದ್ದಾರೆ. ಮನೀಷ್ ಸಿಸೋಡಿಯಾ ಅವರು ಆರೋಗ್ಯ ಸಚಿವರೂ ಆಗಿದ್ದ ಕಾರಣ ಇವರ ವರ್ಗಾವಣೆಯು ಪ್ರಮುಖವಾಗಿದೆ. ಇನ್ನು ಶುಕ್ರವಾರ ಸಿಬಿಐ ವಿಚಾರಣೆಗೆ ಹಾಜರಾದ ಬಳಿಕ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ, ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಹೇಳಿದರು. ಅಲ್ಲದೆ, ಇಂದು ಮಧ್ಯಾಹ್ನ ಸಿಸೋಡಿಯಾ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಮದ್ಯ ನೀತಿ ತಂದಿಟ್ಟ ಸಂಕಷ್ಟ; ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆಗೇನು ಕಾರಣಗಳು?