ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ (Manish Sisodia) ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನು ಖಂಡಿಸಿ ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿ ಹಲವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಿಬಿಐ ಅಧಿಕಾರಿಗಳು ಯಾವ ಬಲವಾದ ಕಾರಣಗಳಿಂದಾಗಿ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ ಎಂಬುದರ ಕುರಿತು ಸಿಬಿಐ ಮೂಲಗಳು ತಿಳಿಸಿವೆ.
ಮನೀಷ್ ಸಿಸೋಡಿಯಾ ಅವರು ೨೦೨೨ರ ಆಗಸ್ಟ್ ೨೦ರಂದು ಮೂರು ಮೊಬೈಲ್‌ಗಳನ್ನು ಬದಲಾಯಿಸಿದ್ದಾರೆ. ಒಂದೇ ಸಿಮ್ ಕಾರ್ಡ್‌ಗೆ ಮೂರು ಮೊಬೈಲ್‌ಗಳನ್ನು ಬದಲಾಯಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ೧೮ ಮೊಬೈಲ್‌ಗಳು ನಾಪತ್ತೆಯಾಗಿವೆ. ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಒಂದೇ ನಂಬರ್‌ನ ಸಿಮ್ ಕಾರ್ಡ್‌ಅನ್ನು ೭ ಮೊಬೈಲ್‌ಗಳನ್ನು ಬಳಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಸಿಸೋಡಿಯಾ ಆಪ್ತನ ತಪ್ಪೊಪ್ಪಿಗೆ?
ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಈಗಾಗಲೇ ಮನೀಷ್ ಸಿಸೋಡಿಯಾ ಆಪ್ತ ದಿನೇಶ್ ಅರೋರಾ ಅವರನ್ನು ಬಂಧಿಸಿದ್ದು, ಅವರು ವಿಚಾರಣೆ ವೇಳೆ ಹಗರಣ ನಡೆದಿರುವುದನ್ನು ಒಪ್ಪಿದ್ದಾರೆ ಎನ್ನಲಾಗಿದೆ. ತಮಗೆ ಬೇಕಾದ ಡೀಲರ್‌ಗಳಿಗೆ ಮದ್ಯ ಮಾರಾಟದ ಪರವಾನಗಿ ನೀಡಲು ಲಂಚ ಪಡೆದಿರುವುದನ್ನು ಅರೋರಾ ಒಪ್ಪಿದ್ದಾರೆ ಎನ್ನಲಾಗಿದೆ. ಇದೆಲ್ಲ ಕಾರಣಗಳಿಂದಾಗಿ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Delhi Liquor Scam: ಸಿಸೋಡಿಯಾ ಬಂಧನ ಬೆನ್ನಲ್ಲೇ ಆಪ್ ಸಂಸದ ಸಂಜಯ್ ಸಿಂಗ್ ಸೇರಿ ಹಲವರನ್ನು ಬಂಧಿಸಿದ ಪೊಲೀಸರು