ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ (Manish Sisodia) ಅವರನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ೫ ದಿನ ಅಂದರೆ ಮಾರ್ಚ್ ೪ರವರೆಗೆ ಸಿಬಿಐ ಕಸ್ಟಡಿಗೆ ವಹಿಸಿದೆ.
ಭಾನುವಾರ ಸತತ ಎಂಟು ಗಂಟೆ ವಿಚಾರಣೆ ಬಳಿಕ ಸಿಸೋಡಿಯಾ ಅವರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿದರು. ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆದಿದೆ. ಇದಕ್ಕಾಗಿ ಭಾರಿ ಪ್ರಮಾಣದಲ್ಲಿ ಪಿತೂರಿ ನಡೆಸಲಾಗಿದೆ. ಹಾಗಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯ ಅಗತ್ಯವಿದ್ದು, ಸಿಸೋಡಿಯಾ ಅವರನ್ನು ಐದು ದಿನ ನಮ್ಮ ಕಸ್ಟಡಿಗೆ ನೀಡಬೇಕು ಎಂದು ಸಿಬಿಐ ಮನವಿ ಮಾಡಿತು.
ಸಿಸೋಡಿಯಾ ಪರ ವಾದ ಮಂಡಿಸಿದ ವಕೀಲರು, “ಯಾರಾದರೂ ಯಾವುದೇ ವಿಷಯದ ಕುರಿತು ಮಾತನಾಡಲಿಲ್ಲ ಎಂದ ಮಾತ್ರಕ್ಕೆ ಅವರನ್ನು ಬಂಧಿಸುವುದು ಸರಿಯಲ್ಲ. ಮನೀಷ್ ಸಿಸೋಡಿಯಾ ಒಬ್ಬ ಸಚಿವರಾಗಿದ್ದು, ಅವರು ಮೊಬೈಲ್ ಬದಲಾಯಿಸಿದ್ದಾರೆ. ಇದೇ ಬಂಧನಕ್ಕೆ ಕಾರಣವಾಗುವುದಿಲ್ಲ” ಎಂದರು. ಆದರೆ, ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಸಿಬಿಐ ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ: Manish Sisodia: ಒಂದೇ ದಿನ 3 ಮೊಬೈಲ್ ಬದಲಾಯಿಸಿದ್ದ ಸಿಸೋಡಿಯಾ, ಬಂಧನ ಹಿಂದಿನ ಬಲವಾದ ಕಾರಣವೇನು?