Site icon Vistara News

Manish Sisodia: ಪತ್ನಿಯನ್ನು ವಾರಕ್ಕೊಮ್ಮೆ ಭೇಟಿಯಾಗಲು ಮನೀಶ್​ ಸಿಸೋಡಿಯಾಗೆ ಅನುಮತಿ ನೀಡಿದ ಕೋರ್ಟ್‌

manish

manish

ನವದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ಹಗರಣದಲ್ಲಿ (Delhi Liquor Policy Case) ಆರೋಪಿಯಾಗಿ ಜೈಲು ಸೇರಿರುವ ಆಪ್​ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ (Manish Sisodia) ಅವರಿಗೆ ವಾರಕ್ಕೊಮ್ಮೆ ತಮ್ಮ ಪತ್ನಿ ಸೀಮಾ ಸಿಸೋಡಿಯಾ ಮತ್ತು ವೈದ್ಯರನ್ನು ಭೇಟಿಯಾಗುವ ಅವಕಾಶ ನೀಡಲಾಗಿದೆ. ಮನೀಶ್‌ ಅವರ ಪತ್ನಿ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು (Delhi’s Rouse Avenue Court) ಸೋಮವಾರ (ಫೆಬ್ರವರಿ 5) ಈ ಅವಕಾಶ ನೀಡಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿಯಾಗಲು ಮನೀಶ್‌ ಅವರಿಗೆ ಕಳೆದ ನವೆಂಬರ್‌ನ ದೀಪಾವಳಿಯ ಸಮಯದಲ್ಲಿ ಕಸ್ಟಡಿ ಪೆರೋಲ್ ನೀಡಲಾಗಿತ್ತು. ವಾರಕ್ಕೊಮ್ಮೆ ಪತ್ನಿಯನ್ನು ಭೇಟಿಯಾಗಲು ಕಸ್ಟಡಿ ಪೆರೋಲ್‌ ನೀಡಬೇಕೆಂದು ಮನೀಶ್‌ ಕೋರ್ಟ್‌ನ ಮೊರೆ ಹೋಗಿದ್ದರು. ಇದನ್ನು ಪರಿಗಣಿಸಿದ ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್‌ಪಾಲ್‌ ಈ ಬಗ್ಗೆ ಜಾರಿ ನಿರ್ದೇಶನಾಲಯ (Enforcement Directorate)ಕ್ಕೆ ನೋಟಿಸ್‌ ನೀಡಿ, ಕಸ್ಟಡಿ ಪೆರೋಲ್‌ಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

2021ರಲ್ಲಿ ದೆಹಲಿಯಲ್ಲಿ ನೂತನ ಅಬಕಾರಿ ನೀತಿ ಜಾರಿ ಮಾಡುವಾಗ, ಚಿಲ್ಲರೆ ವ್ಯಾಪಾರಿಗಳಿಗೆ ಲೈಸೆನ್ಸ್​ ಕೊಡುವಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪದಡಿ ಇಡಿ-ಸಿಬಿಐ ತನಿಖಾದಳಗಳು ತನಿಖೆ ನಡೆಸುತ್ತಿವೆ. ಅಬಕಾರಿ ಇಲಾಖೆ ಹೊಣೆಯನ್ನು ಸಿಸೋಡಿಯಾ ಅವರೇ ಹೊತ್ತಿದ್ದರಿಂದ ಅವರನ್ನೇ ನಂಬರ್​ 1 ಆರೋಪಿ ಎಂದು ಪರಿಗಣಿಸಿ, ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಅಬಕಾರಿ ಅಕ್ರಮ ಹಗರಣದಡಿ 2023ರ ಫೆ. 26ರಂದು ಸಿಬಿಐ ಅಧಿಕಾರಿಗಳಿಂದ ಬಂಧಿತರಾಗಿರುವ ಮನೀಶ್ ಸಿಸೋಡಿಯಾ ಅವರನ್ನು, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ಮಾರ್ಚ್​ 9ರಂದು ಬಂಧಿಸಿದ್ದಾರೆ. 

ಫೆಬ್ರವರಿಯಲ್ಲಿ ಸಿಬಿಐನಿಂದ ಬಂಧಿಸಲ್ಪಡುವ ಮೊದಲು ಮನೀಶ್‌ ಅವರು ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರದಲ್ಲಿ ಶಿಕ್ಷಣ ಮತ್ತು ಅಬಕಾರಿ ಇಲಾಖೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಜತೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ಹೊಂದಿದ್ದರು. ಬಂಧನದ ನಂತರ ಅವರು ಉಪಮುಖ್ಯಮಂತ್ರಿ ಮತ್ತು ವಿವಿಧ ಇಲಾಖೆಗಳ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: Delhi Liquor Policy Case: ಮನೀಶ್​ ಸಿಸೋಡಿಯಾಗೆ ಸಿಗದ ಜಾಮೀನು; ಏ.5ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ

ಏನಿದು ಪ್ರಕರಣ?

ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು ಅಬಕಾರಿ ನೀತಿ 2021-22 ಜಾರಿಗೆ ತಂದಿತ್ತು. ಖಾಸಗಿ ಸಂಸ್ಥೆಗಳು ಚಿಲ್ಲರೆ ಮದ್ಯ ಮಾರಾಟ ವಲಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡುವ ದಿಸೆಯಲ್ಲಿ ನೀತಿ ಜಾರಿಗೆ ತರಲಾಗಿದ್ದು, ಇದಕ್ಕಾಗಿ ಭಾರಿ ಪ್ರಮಾಣದ ಹಣ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನೀತಿಯು ವಿವಾದಕ್ಕೆ ಕಾರಣವಾಗುತ್ತಲೇ ಅರವಿಂದ್‌ ಕೇಜ್ರಿವಾಲ್‌ ಸರ್ಕಾರವು ವಾಪಸ್‌ ಪಡೆದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕೆ. ಕವಿತಾ ಅವರನ್ನೂ ಇ.ಡಿ ವಿಚಾರಣೆ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version