ನವ ದೆಹಲಿ: ತಮ್ಮ ವಿರುದ್ಧ ಸಿಬಿಐ ತನಿಖೆ ಪ್ರಾರಂಭವಾದ ಬೆನ್ನಲ್ಲೇ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು, ನರೇಂದ್ರ ಮೋದಿಯವರ ಒಂದು ಹಳೇ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗಿನ ವಿಡಿಯೋ ಇದಾಗಿದ್ದು, ‘ಋತುಮಾನಗಳು ನಿಧಾನಕ್ಕೆ ಬದಲಾಗುತ್ತವೆ. ಆದರೆ ಸರ್, ನೀವು ಬದಲಾಗುವ ವೇಗ ನೋಡಿ ಗಾಳಿಗೇ ದಿಗಿಲಾಗಿದೆ’ ಎಂದು ಕಾವ್ಯಾತ್ಮಕವಾಗಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಅಂದಹಾಗೇ, ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ ಆರೋಪದಡಿ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ಶುರುವಾಗಿದ್ದು, ಅವರಿಗೆ ಸೇರಿದ ಸ್ಥಳಗಳಲ್ಲಿ ರೇಡ್ ಆಗಿದೆ. ಅಷ್ಟೇ ಅಲ್ಲ, ಈ ಕೇಸ್ನಲ್ಲಿ ಸಿಸೋಡಿಯಾ ಅವರೇ ಆರೋಪಿ ನಂಬರ್ 1 ಆಗಿದ್ದಾರೆ.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಿಬಿಐನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ ವಿಡಿಯೋ ಇದು. ‘ಕೇಂದ್ರೀಯ ತನಿಖಾದಳವನ್ನು ರಾಜಕೀಯಗೊಳಿಸಲಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಮತ್ತು ಸಾರ್ವಜನಿಕರನ್ನು ಹಿಂಸಿಸಲು ಬಳಸಿಕೊಳ್ಳುತ್ತಿರುವ ಬಗ್ಗೆ ಮುಂದೊಂದು ದಿನ ನೀವು ಉತ್ತರ ನೀಡಬೇಕಾಗುತ್ತದೆ. ತಮ್ಮ ರಾಜಕೀಯ ನಾಯಕರನ್ನು ಸಂತುಷ್ಟಗೊಳಿಸಲು ಸಿಬಿಐ ಅಧಿಕಾರಿಗಳು ಪ್ರತಿಪಕ್ಷಗಳ ಸಚಿವರು, ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಸಿಬಿಐ ಮೇಲೆ ದೇಶದ ಜನರಿಗೆ ನಂಬಿಕೆಯೇ ಇಲ್ಲದಂತಾಗಿದೆ’ ಎಂದು ನರೇಂದ್ರ ಮೋದಿ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಆ ಹಳೇ ವಿಡಿಯೋವನ್ನು ಶೇರ್ ಮಾಡಿಕೊಂಡ ಸಿಸೋಡಿಯಾ, ಈಗ ನೀವು ಮಾಡುತ್ತಿರುವುದೇನು ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಮಾತು-ಕೃತಿಗಳು ಋತುಗಳಿಗಿಂತಲೂ ವೇಗವಾಗಿ ಬದಲಾಗುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಶನಿವಾರ ಸಿಸೋಡಿಯಾ ಪ್ರಧಾನಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ‘ಮದ್ಯದ ನೀತಿಯಾಗಲೀ, ಭ್ರಷ್ಟಾಚಾರ ತಡೆಯಾಗಲೀ ಬಿಜೆಪಿಯ ಅಜೆಂಡಾವಲ್ಲ. ಕೇಜ್ರಿವಾಲ್ಗೆ ಕಡಿವಾಣ ಹಾಕಲು ಬಿಜೆಪಿ ಇಷ್ಟೆಲ್ಲ ಸಾಹಸ ಮಾಡುತ್ತಿದೆ. ಮುಂದಿನ 2024ರ ಲೋಕಸಭೆ ಚುನಾವಣೆ ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ನಡುವಿನ ನೇರ ಹಣಾಹಣಿಯಾಗಲಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: Excise policy | ಮನೀಷ್ ಸಿಸೋಡಿಯಾ ವಿರುದ್ಧ ಕೇಸ್ ದಾಖಲಿಸುವ ಮುನ್ನ ರಾಷ್ಟ್ರಪತಿ ಅನುಮೋದನೆ ಪಡೆದ ಸಿಬಿಐ