ದಿಸ್ಪುರ: ನೂತನ ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿರುವ, ಈಗಾಗಲೇ ವಿಚಾರಣೆ ನಡೆಸಿರುವ ಬೆನ್ನಲ್ಲೇ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ (Manish Sisodia) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಸೋಡಿಯಾ ಅವರಿಗೆ ಅಸ್ಸಾಂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨೯ರಂದು ಕೋರ್ಟ್‌ಗೆ ಹಾಜರಾಗಬೇಕು ಎಂದು ಕಾಮ್ರೂಪ್ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್, ಸಿಸೋಡಿಯಾ ಅವರಿಗೆ ಸಮನ್ಸ್ ನೀಡಿದೆ. ಹಾಗಾಗಿ, ಅಬಕಾರಿ ನೀತಿ ಪ್ರಕರಣದಲ್ಲಿಯೇ ಸಂಕಷ್ಟಕ್ಕೆ ಸಿಲುಕಿರುವ ದೆಹಲಿ ಉಪ ಮುಖ್ಯಮಂತ್ರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಜೂನ್ ೪ರಂದು ಸುದ್ದಿಗೋಷ್ಠಿ ನಡೆಸಿದ್ದ ಸಿಸೋಡಿಯಾ, ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಹಲವು ಆರೋಪ ಮಾಡಿದ್ದರು. “ಬಿಸ್ವಾ ಶರ್ಮಾ ಅವರು ತಮ್ಮ ಪತ್ನಿಯ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಬೇರೊಂದು ಕಂಪನಿಯಿಂದ ಪಿಪಿಇ ಕಿಟ್ ಖರೀದಿಸುವಾಗ ೬೦೦ ರೂ. ಇರುವ ಒಂದು ಪಿಪಿಇ ಕಿಟ್‌ಗೆ ಸರಕಾರ ೯೯೦ ರೂ. ನೀಡಿ ಖರೀದಿಸಿದೆ. ಗುತ್ತಿಗೆ ಹಗರಣವು ದೊಡ್ಡ ಅಪರಾಧವಾಗಿದೆ” ಎಂದು ಆರೋಪಿಸಿದ್ದರು. ಹಾಗಾಗಿ, ಅಸ್ಸಾಂ ಮುಖ್ಯಮಂತ್ರಿಯು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ | Excise policy | ಮನೀಷ್ ಸಿಸೋಡಿಯಾ ವಿರುದ್ಧ ಕೇಸ್ ದಾಖಲಿಸುವ ಮುನ್ನ ರಾಷ್ಟ್ರಪತಿ ಅನುಮೋದನೆ ಪಡೆದ ಸಿಬಿಐ