ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣ (Delhi Liquor Policy Case) ಸಂಬಂಧ ಬಂಧಿತರಾಗಿರುವ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಮತ್ತೆ ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನ್ಯಾಯಾಲಯವು ನೀಡಿದೆ. ಇದೇ ವೇಳೆ, ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್, ಮಾರ್ಚ್ 10ಕ್ಕೆ ಮುಂದೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದಾಗಿದೆ. ಹೀಗಿದ್ದೂ ಅವರನ್ನು ಜೈಲಿನಲ್ಲಿಡುವುದು ಯಾವುದೇ ಉದ್ದೇಶವನ್ನು ಈಡೇರಿಸುವಂತಾಗುವುದಿಲ್ಲ ಎಂದು ಅರ್ಜಿ ಸಿಸೋಡಿಯಾ ಕೋರಿದ್ದರು.
3 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದ ಸಿ ಬಿ ಐ
ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ, ಸಿಬಿಐ ಮತ್ತೆ ಸಿಸೋಡಿಯಾ ಅವರನ್ನು 3 ದಿನಗಳ ಕಾಲ ನೀಡುವಂತೆ ಕೋರ್ಟ್‌ಗೆ ಕೋರಿತು. ಆರೋಪಿ ವಿಚಾರಣೆಗೆ ಸಹಕರಿಸುತ್ತಿಲ್ಲ. ಅಲ್ಲದೇ ಆರೋಪಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು ಅಲ್ಲಿ ಕೂಡ ಸಮಯ ವ್ಯರ್ಥ ಆಗಿದೆ. ಹಾಗಾಗಿ ಮೂರು ದಿನ ಕಸ್ಟಡಿಗೆ ಕೊಡಬೇಕು ಎಂದು ಸಿಬಿಐ ಹೇಳಿತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ಸಿಸೋಡಿಯಾ ಪರ ವಕೀಲರು, ಸಿಸೋಡಿಯಾ ಅವರಿಗೆ ವಿಚಾರಣೆ ವೇಳ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕೇಳಿದ್ದ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾರೆ ಎಂದು ತಿಳಿಸಿದರು. ಈ ವಾದ ವಿವಾದ ಆಲಿಸಿದ ಕೋರ್ಟ್, ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದರು.
ಇದನ್ನೂ ಓದಿ: ಸಿಸೋಡಿಯಾ, ಜೈನ್ ಬಂಧನ: ಬಿಜೆಪಿ ವಿರುದ್ಧ ಡೋರ್ ಟು ಡೋರ್ ಕ್ಯಾಂಪೇನ್‌ಗೆ ಸಿದ್ಧವಾದ ಆಮ್ ಆದ್ಮಿ ಪಾರ್ಟಿ
ಆರೋಗ್ಯ ತಪಾಸಣೆಗೆ ಸೂಚಿಸಿದ ಕೋರ್ಟ್
ಸಿಬಿಐ ಮಾನಸಿಕ ಹಿಂಸೆ ನೀಡುತ್ತಿದೆ ಎಂದ ಆರೋಪಿಸಿದ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಅವರ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸುವಂತೆ ಸೂಚಿಸಿದೆ. ಪ್ರತ 24 ಗಂಟೆಗೆ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಸಿಬಿಐಗೆ ಕೋರ್ಟ್ ಸೂಚಿಸಿದೆ.