Site icon Vistara News

Delhi Excise Policy Case | ದೆಹಲಿ ಡಿಸಿಎಂ ಮನೀಷ್‌ ಸಿಸೋಡಿಯಾ ಆಪ್ತ ಕಾರ್ಯದರ್ಶಿಯ ಬಂಧನ

Manish Sisodia

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೂತನ ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ (Delhi Excise Policy Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ (Manish Sisodia) ಅವರ ಆಪ್ತ ಕಾರ್ಯದರ್ಶಿಯನ್ನು (Personal Assistant) ಬಂಧಿಸಿದ್ದಾರೆ.

ಸಿಸೋಡಿಯಾ ಆಪ್ತ ಕಾರ್ಯದರ್ಶಿ ದೇವೇಂದ್ರ ಶರ್ಮಾ (Devendra Sharma) ಅವರು ದೆಹಲಿ ಮಂಡಾವ್ಲಿಯಲ್ಲಿ ನೆಲೆಸಿದ್ದು, ಅವರ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ ವಿಚಾರಣೆಗೆ ದೇವೇಂದ್ರ ಶರ್ಮಾ ಸಹಕರಿಸಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಇವರೂ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ.

ಇ.ಡಿ ಅಧಿಕಾರಿಗಳ ದಾಳಿ ಕುರಿತು ಮನೀಷ್‌ ಸಿಸೋಡಿಯಾ ಅವರೇ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. “ತನಿಖಾ ಸಂಸ್ಥೆಯ ಅಧಿಕಾರಿಗಳು ಮೊದಲು ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿ, ನನ್ನ ಮನೆಯ ಮೇಲೆ ದಾಳಿ ನಡೆಸಿದರು. ದಾಳಿ ನಡೆಸಿದಾಗ ಅವರಿಗೆ ಅಪರಾಧ ನಡೆಸಿರುವ ಕುರಿತು ಯಾವುದೇ ದಾಖಲೆ ಸಿಗಲಿಲ್ಲ. ಈಗ ನನ್ನ ಆಪ್ತ ಕಾರ್ಯದರ್ಶಿ ಮನೆ ಮೇಲೆ ದಾಳಿ ನಡೆಸಿದ್ದು, ಈಗಲೂ ಏನೂ ಸಿಕ್ಕಿಲ್ಲ. ಆದರೂ, ಅವರು ಆಪ್ತ ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ. ಗುಜರಾತ್‌ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ಇಂತಹ ತಂತ್ರ ಮಾಡುತ್ತಿದ್ದಾರೆ” ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖಾ ಸಂಸ್ಥೆ ಅಧಿಕಾರಿಗಳು ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಇದೇ ಪ್ರಕರಣದಲ್ಲಿ ಅಧಿಕಾರಿಗಳು ಸಿಸೋಡಿಯಾ ಅವರನ್ನು ಯಾವಾಗ ಬೇಕಾದರೂ ಬಂಧಿಸಬಹುದು ಎಂದು ಆಪ್‌ ನಾಯಕರು ಇದಕ್ಕೂ ಮೊದಲು ಹೇಳಿದ್ದರು.

ಇದನ್ನೂ ಓದಿ | Delhi excise policy case | ನೋಡ್ತಿರಿ, ನಾಳೆ ಮನೀಷ್​​ ಸಿಸೋಡಿಯಾ ಅರೆಸ್ಟ್ ಆಗ್ತಾರೆ ಎಂದ ಆಮ್​ ಆದ್ಮಿ ಪಕ್ಷದ ಹಿರಿಯ ನಾಯಕ !

Exit mobile version