Site icon Vistara News

Mann Ki Baat 2022 | ದೀನ್‌ ದಯಾಳರ ಆದರ್ಶಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

man ki baath

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನೆಚ್ಚಿನ 93 ನೇ ಮನ್‌ ಕಿ ಬಾತ್‌ ಬಾನುಲಿ ಕಾರ್ಯಕ್ರಮದಲ್ಲಿ (Mann Ki Baat 2022) ಭಾನುವಾರ, ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಅವರ 106ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಆದರ್ಶಗಳನ್ನು ಸ್ಮರಿಸಿದರು.

ದೇಶದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣವನ್ನೂ ಅಗತ್ಯವಾಗಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ದೀನ ದಯಾಳ್‌ ಉಪಾಧ್ಯಾಯ ಅವರ ಏಕಾತ್ಮ ಮಾನವತಾ ಆದರ್ಶದ (Integral Humanism) ಅನುಷ್ಠಾನ ಅಗತ್ಯ. ಎಲ್ಲರೂ ದೀನ ದಯಾಳರ ಆದರ್ಶವನ್ನು ಪಾಲಿಸಿದರೆ ದೇಶ ಸದಾ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿದೆ ಎಂದರು.

ಚೀತಾಗಳಿಗೆ ಭಾರತೀಯ ಹೆಸರು ಸೂಚಿಸಲು ಸಲಹೆ

ನಮೀಬಿಯಾದಿಂದ ಭಾರತಕ್ಕೆ ತಂದಿರುವ ಎಂಟು ಚೀತಾಗಳಿಗೆ ಭಾರತೀಯ ಸಂಪ್ರದಾಯದ ಅನುಸಾರ ನಾಮಕರಣ ಮಾಡಲು ಹೆಸರುಗಳನ್ನು ಸೂಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಈ ಕುರಿತ ಸ್ಪರ್ಧೆಯಲ್ಲಿ ಜನತೆ ಉತ್ಸಾಹದಿಂದ ಭಾಗವಹಿಸುವಂತೆ ತಿಳಿಸಿದರು. ಚೀತಾಗಳು ಭಾರತಕ್ಕೆ ಮರಳಿ ಬಂದಿರುವುದನ್ನು ಜನತೆ ಸ್ವಾಗತಿಸಿದ್ದಾರೆ. ಇನ್ನು ಮುಂದೆ ಅವುಗಳನ್ನು ಪರಿಶೀಲಿಸುವ ಕೆಲಸ ಮತ್ತು ಜವಾಬ್ದಾರಿ ಮುಂದಿದೆ ಎಂದರು.

ಚಂಡೀಗಢ ಏರ್‌ಪೋರ್ಟ್‌ಗೆ ಭಗತ್‌ ಸಿಂಗ್‌ ಹೆಸರು: ಚಂಡೀಗಢದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಗತ್‌ ಸಿಂಗ್‌ ಅವರ ಹೆಸರನ್ನು ಇಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.

ಕೈಮಗ್ಗ, ಖಾದಿ ಉತ್ಪನ್ನಗಳ ಖರೀದಿಗೆ ಸಲಹೆ

ಈ ಸಲದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕೈಮಗ್ಗದ ಉತ್ಪನ್ನಗಳನ್ನು, ಖಾದಿಯಿಂದ ತಯಾರಿಸಿದ ವಸ್ತುಗಳನ್ನು, ಬಟ್ಟೆ ಬರೆಗಳನ್ನು ಖರೀದಿಸುವಂತೆ, ಪ್ಲಾಸ್ಟಿಕ್‌ ಚೀಲಗಳ ಬದಲು ಸ್ಥಳೀಯ ಬಟ್ಟೆ, ಸೆಣಬಿನ ಚೀಲಗಳನ್ನು ಬಳಸುವಂತೆ ಪ್ರಧಾನಿ ಮೋದಿ ಮನ್‌ ಕಿ ಬಾತ್‌ನಲ್ಲಿ ತಿಳಿಸಿದರು. ಈ ಹಿಂದಿನ ಮನ್‌ ಕಿ ಬಾತ್‌ನಲ್ಲಿ ಸಿರಿ ಧಾನ್ಯಗಳ ಮಹತ್ವವನ್ನು ಪ್ರಸ್ತಾಪಿಸಿದ್ದೆ. ಈ ಬಗ್ಗೆ ಜನ ಆಸಕ್ತರಾಗಿದ್ದಾರೆ. ಹಲವಾರು ಮಂದಿ ಸಿರಿಧಾನ್ಯಗಳನ್ನು ಬಳಸಲು ಆರಂಭಿಸಿದ್ದಾರೆ. ಆದ್ದರಿಂದ ಸಿರಿಧಾನ್ಯಗಳ ವಿವರವನ್ನು ಒಳಗೊಂಡಿರುವ ಇ-ಬುಕ್‌ ಅನ್ನು ರಚಿಸಬೇಕು. ಸಿರಿಧಾನ್ಯಗಳ ಬಳಕೆ ಬಗ್ಗೆ ಜನತೆಯ ಅನುಭವಗಳನ್ನು ಅದರಲ್ಲಿ ದಾಖಲಿಸಬೇಕು ಎಂದರು.

ಒತ್ತಡ ಉಪಶಮನ: ವಿಶ್ವಸಂಸ್ಥೆ ಭಾರತೀಯ ಯೋಗಕ್ಕೆ ಮಾನ್ಯತೆ ನೀಡಿದ ಬಳಿಕ, ಭಾರತದ ಹೈಪರ್‌ ಟೆನ್ಷನ್‌ ನಿಯಂತ್ರಣ ಕುರಿತ ಉಪಕ್ರಮಗಳನ್ನೂ ಗುರುತಿಸಿದೆ. ಭಾರತದ ಕಾರ್ಯಕ್ರಮಗಳನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಮುಕ್ತವಾಗಿ ಸ್ವೀಕರಿಸುತ್ತಿರುವುದಕ್ಕೆ ಇದು ನಿದರ್ಶನವಾಗಿದೆ ಎಂದರು.

ನ್ಯಾಶನಲ್‌ ಗೇಮ್ಸ್‌ಗೆ ಪ್ರಧಾನಿ ಶುಭಾಶಯ

ಗುಜರಾತ್‌ನಲ್ಲಿ ಸೆಪ್ಟೆಂಬರ್‌ 29ರಿಂದ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟವನ್ನು (ನ್ಯಾಶನಲ್‌ ಗೇಮ್ಸ್)‌ ಪ್ರಸ್ತಾಪಿಸಿದ ಮೋದಿಯವರು, ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಕೋವಿಡ್-‌19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಗಳಿಂದ ಈ ಕ್ರೀಡಾಕೂಟ ನಡೆದಿರಲಿಲ್ಲ.

ಇದನ್ನೂ ಓದಿ: Mann Ki Baat 2022 | ರಸ್ತೆ ಬದಿ ಗೋಡೆಗಳನ್ನು ಸ್ವಚ್ಛಗೊಳಿಸುವ ಬೆಂಗಳೂರಿನ ಯೂತ್‌ ಫಾರ್ ಪರಿವರ್ತನ್‌ಗೆ ಪ್ರಧಾನಿ ಪ್ರಶಂಸೆ

Exit mobile version