ನವದೆಹಲಿ: ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಐತಿಹಾಸಿಕ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಚಂದ್ರಯಾನ-3ರ ಯಶಸ್ಸನ್ನು ದೇಶ ಎಂದಿಗೂ ಸ್ಮರಿಸಿಕೊಳ್ಳುತ್ತದೆ. ಜನರ ಸಾಮೂಹಿಕ ಪ್ರಯತ್ನಗಳಿಂದಾಗಿ ವೈಜ್ಞಾನಿಕ ಬೆಳವಣಿಗೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದರು. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ʼಮನ್ ಕಿ ಬಾತ್ʼ (Mann Ki Baat)ನ 113ನೇ ಸಂಚಿಕೆಯನ್ನುದ್ದೇಶಿಸಿ ಅವರು ಮಾತನಾಡಿದರು.
Sharing this month's #MannKiBaat. Do tune in as we discuss diverse topics.https://t.co/foDjJSa309
— Narendra Modi (@narendramodi) August 25, 2024
21ನೇ ಶತಮಾನದಲ್ಲಿ ಭಾರತದಲ್ಲಿ ಬಹಳಷ್ಟು ಅತ್ಯುತ್ತಮ ಕಾರ್ಯಗಳು ನಡೆಯುತ್ತಿವೆ. ಇವು ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣದ ಗುರಿಯನ್ನು ಇನ್ನಷ್ಟು ಬಲಪಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು. “ಉದಾಹರಣೆಗೆ ಆಗಸ್ಟ್ 23ರಂದು ದೇಶವು ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿತು. ನೀವೆಲ್ಲರೂ ಈ ದಿನವನ್ನು ಆಚರಿಸಿದ್ದೀರಿ ಎನ್ನುವ ನಂಬಿಕೆ ನನಗಿದೆ. ಮತ್ತೊಮ್ಮೆ ನೀವೆಲ್ಲರೂ ಚಂದ್ರಯಾನ -3ರ ಯಶಸ್ಸನ್ನು ನೆನಪಿಸಿಕೊಳ್ಳಬೇಕು. ಕಳೆದ ವರ್ಷ ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿರುವ ಶಿವ-ಶಕ್ತಿ ಪಾಯಿಂಟ್‌ನಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ” ಎಂದು ಪ್ರಧಾನಿ ಮೋದಿ ಅಭಿಮಾನದಿಂದ ನುಡಿದರು.
ಯುವಜನತೆಗೆ ಕರೆ
ʼʼಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಅಭಿವೃದ್ಧಿ ಹೊಂದಿದ ಭಾರತ ಹಾಗೂ ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ಒಂದು ಲಕ್ಷದಷ್ಟು ಯುವಜನತೆ ರಾಜಕೀಯಕ್ಕೆ ಪ್ರವೇಶಿಸಲು ಕರೆ ನೀಡಿದ್ದೆ. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿದೆʼʼ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ʼʼದೊಡ್ಡ ಸಂಖ್ಯೆಯಲ್ಲಿ ಯುವಜನತೆ ರಾಜಕೀಯಕ್ಕೆ ಸೇರಲು ಸಿದ್ಧರಿದ್ದಾರೆ. ಅವರಿಗೆ ಸರಿಯಾದ ಅವಕಾಶ ಹಾಗೂ ಮಾರ್ಗದರ್ಶನದ ಅಗತ್ಯವಿದೆʼʼ ಎಂದು ಅಭಿಪ್ರಾಯಪಟ್ಟರು.
ʼʼಸ್ವಾತಂತ್ರ್ಯ ಚಳುವಳಿಯಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರು, ಸಮಾಜದ ಎಲ್ಲ ವರ್ಗದ ಅಸಂಖ್ಯಾತ ಜನರು ಭಾಗವಹಿಸಿದ್ದರು. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮೆಲ್ಲವನ್ನು ಅರ್ಪಿಸಿಕೊಂಡಿದ್ದರು. ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ನಾವು ಶ್ರಮಪಡಬೇಕುʼʼ ಎಂದು ಕರೆ ನೀಡಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿನ ಸುಧಾರಣೆಯಿಂದ ದೇಶದ ಯುವ ಜನತೆ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ ಎಂದು ಮೋದಿ ಹೇಳಿದರು. ಇದೇ ವೇಳೆ ಸ್ಟಾರ್ಟ್ಅಪ್ ಸ್ಪೇಸ್‌ಟೆಕ್ ಗ್ಯಾಲಕ್ಸಿ ತಂಡವನ್ನು ಕಟ್ಟಿದ ಐಐಟಿ ಮದ್ರಾಸ್‌ನ ಹಿರಿಯ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದರು.
ಯುವ ವಿಜ್ಞಾನಿಗಳಲ್ಲಿ ಒಬ್ಬರಾದ ಸುಯಾಶ್ ಮಾತನಾಡಿ, “ನಾವೆಲ್ಲರೂ ಐಐಟಿ ಮದ್ರಾಸ್‌ನಲ್ಲಿ ಭೇಟಿಯಾದೆವು. ಆ ಸಮಯದಲ್ಲಿ ‘ಹೈಪರ್ ಲೂಪ್’ ಎಂಬ ಯೋಜನೆ ಹೊಳೆಯಿತು. ಅದರಂತೆ ನಾವು ‘ಅವಿಷ್ಕಾರ್ ಹೈಪರ್ ಲೂಪ್’ ಎಂಬ ತಂಡವನ್ನು ಪ್ರಾರಂಭಿಸಿದೆವು. ಆ ಯೋಜನೆಯೊಂದಿಗೆ ಅಮೆರಿಕಕ್ಕೆ ತೆರಳಿದೆವು. ಏಷ್ಯಾದಿಂದ ಅಲ್ಲಿಗೆ ಹೋಗಿ ದೇಶದ ಧ್ವಜವನ್ನು ಹಾರಿಸಿದ ಏಕೈಕ ತಂಡ ನಮ್ಮದುʼʼ ಎಂದು ವಿವರಿಸಿದರು.
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಕ್ಷಿತ್ ತಮ್ಮ ಸ್ಟಾರ್ಟ್ಅಪ್ ತಂತ್ರಜ್ಞಾನದ ಪ್ರಯೋಜನಗಳ ಬಗ್ಗೆ ಮಾತನಾಡಿದರು. ʼʼನಮ್ಮ ಈ ತಂತ್ರಜ್ಞಾನ (‘ಹೈಪರ್ ಲೂಪ್’)ದಿಂದ ಪ್ರತಿದಿನ ದೇಶದ ಯಾವುದೇ ಮೂಲೆಯ ಸ್ಪಷ್ಟ ಚಿತ್ರವನ್ನು ತೆಗೆದುಕೊಳ್ಳಬಹುದು ಮತ್ತು ನಾವು ಸಂಗ್ರಹಿಸುವ ಡೇಟಾವನ್ನು ಎರಡು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ. ಮೊದಲನೆಯದು ಗಡಿಗಳು, ಸಾಗರಗಳು ಮತ್ತು ಸಮುದ್ರಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ಭಾರತವನ್ನು ಸಂರಕ್ಷಿಸಲಾಗುತ್ತದೆ. ಜತೆಗೆ ಶತ್ರು ಚಟುವಟಿಕೆಗಳನ್ನು ಪ್ರತಿದಿನ ಗಮನಿಸಲಾಗುತ್ತದೆ. ಎರಡನೆಯದಾಗಿ ಭಾರತದ ರೈತರನ್ನು ಸಬಲೀಕರಣಗೊಳಿಸಲಾಗುತ್ತದೆʼʼ ಎಂದು ತಿಳಿಸಿದರು.
ಇದನ್ನೂ ಓದಿ: Mann Ki Baat: ಪ್ಯಾರಿಸ್ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ʼಮನ್ ಕಿ ಬಾತ್ʼನಲ್ಲಿ ಮೋದಿ ಕರೆ