ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ (Mann Ki Baat) ರೇಡಿಯೊ ಸರಣಿಯ 106ನೇ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. ಹಾಗೆಯೇ, ಸ್ವಚ್ಛತೆ, ಮಹಿಳಾ ಸಬಲೀಕರಣ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ಹಾಗೆಯೇ, “ಅಕ್ಟೋಬರ್ 31ರಂದು ದೇಶಾದ್ಯಂತ ಮೇರಾ ಯುವ ಭಾರತ್ (Mera Yuva Bharat Or My Bharat) ಸಂಸ್ಥೆಗೆ ಚಾಲನೆ ನೀಡಲಾಗುತ್ತದೆ” ಎಂದು ನರೇಂದ್ರ ಮೋದಿ (Narendra Modi) ಘೋಷಿಸಿದರು.
“ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ದೇಶಾದ್ಯಂತ ಮೈ ಭಾರತ್ ಸಂಸ್ಥೆ ಸ್ಥಾಪನೆಗೆ ಚಾಲನೆ ನೀಡಲಾಗುತ್ತದೆ. ದೇಶದ ಯುವಕರ ಶ್ರೇಯೋಭಿವೃದ್ಧಿಗಾಗಿ ಮೈ ಭಾರತ್ ಸಂಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದರಿಂದ ಯುವಕರು ಕೂಡ ಹತ್ತಾರು ಅವಕಾಶಗಳನ್ನು ಪಡೆಯಬಹುದಾಗಿದೆ. ಇದರಿಂದ ಯುವಕರು ಕೂಡ ದೇಶ ಕಟ್ಟುವ ಕೈಂಕರ್ಯದಲ್ಲಿ ತೊಡಗಬಹುದು” ಎಂದು ಹೇಳಿದರು.
Sharing this month's #MannKiBaat. Do tune in! https://t.co/0K0rmsnqqS
— Narendra Modi (@narendramodi) October 29, 2023
ಏನಿದು ಮೈ ಭಾರತ್?
ಮೈ ಭಾರತ್ ಅಥವಾ ಮೇರಾ ಭಾರತ್ ಎಂಬುದು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ದೇಶದ ಯುವಕರಲ್ಲಿ ಕೌಶಲ ಅಭಿವೃದ್ಧಿ, ಅವರಲ್ಲಿ ನಾಯಕತ್ವ ಬೆಳೆಸುವುದು, ಯುವಕರಿಗೆ ಹೊಸ ಅವಕಾಶ ಒದಗಿಸುವುದು, ಏಕೀಕೃತ ಮಾಹಿತಿ ಸಂಗ್ರಹ, ಸಂಪನ್ಮೂಲಗಳ ಕ್ರೋಡೀಕರಣ ಸೇರಿ ಹಲವು ದಿಸೆಯಲ್ಲಿ ಮೈ ಭಾರತ್ ಸ್ವಾಯತ್ತ ಸಂಸ್ಥೆಯನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಒಂದು ವೆಬ್‌ಸೈಟ್ ಕೂಡ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಮೈ ಭಾರತ್ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿತ್ತು.
ಮೋದಿ ಮನದ ಮಾತಿನ ಪ್ರಮುಖಾಂಶಗಳು
- ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿವೆ, ಎಲ್ಲರೂ ದೇಶೀಯ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ. ಯುಪಿಐ ಮೂಲಕ ಡಿಜಿಟಲ್ ಪೇಮೆಂಟ್ಗೆ ಆದ್ಯತೆ ನೀಡಿ.
- ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲ ನೀಡೋಣ, ತ್ಯಾಜ್ಯ ನಿರ್ವಹಣೆಯನ್ನೂ ಕಲಿಯೋಣ. ಆ ಮೂಲಕ ನಿರ್ಮಲ ಭಾರತ ನಿರ್ಮಿಸೋಣ.
- ಪ್ರತಿಯೊಬ್ಬರಿಗೂ ಹಬ್ಬದ ಶುಭಾಶಯಗಳು. ದೀಪಾವಳಿ ವೇಳೆ ಪಟಾಕಿ ಹಚ್ಚುವಾಗ ಹುಷಾರಾಗಿರಿ. ಯಾವುದೇ ಅವಘಡಗಳಿಗೆ ಆಸ್ಪದ ನೀಡದಿರಿ.
- ಅಕ್ಟೋಬರ್ 31ರಂದು ಏಕತಾ ದಿವಸ ಆಚರಿಸಲಾಗುತ್ತದೆ. ಅಂದು, ನೀವು ಕೂಡ ನಿಮ್ಮ ಸುತ್ತಲಿನ ಪ್ರದೇಶಗಳಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿ.
ಇದನ್ನೂ ಓದಿ: Mann Ki Baat: ಮನ್ ಕೀ ಬಾತ್ನಲ್ಲಿ ಕ್ರೀಡಾಪಟುಗಳನ್ನು ಹೊಗಳಿದ ಪ್ರಧಾನಿ ಮೋದಿ; ಕುಸ್ತಿಪಟುಗಳಿಗೆ ಸಂದೇಶ?