Site icon Vistara News

Mann ki baat | ಭಾರತಕ್ಕೆ ಜಿ20 ಅಧ್ಯಕ್ಷತೆ ಅತಿ ದೊಡ್ಡ ಅವಕಾಶ, ಇದನ್ನು ಬಳಸಿಕೊಳ್ಳಬೇಕು: ಪ್ರಧಾನಿ ಮೋದಿ

BJP Big Plan Narendra Modi's Mann Ki Baat 100th episode to broadcast worldwide

ನವ ದೆಹಲಿ: ಜಿ20 ಶೃಂಗದ ಅಧ್ಯಕ್ಷತೆ ಭಾರತಕ್ಕೆ ಒಲಿದಿರುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿಯಾಗಲು ಅತಿ ದೊಡ್ಡ ಅವಕಾಶವನ್ನು ಒದಗಿಸಿದೆ. ಇದನ್ನು ಸಂಪೂರ್ಣವಾಗಿ ಎಲ್ಲರೂ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

೯೫ನೇ ಮನ್‌ ಕಿ ಬಾತ್‌ನಲ್ಲಿ ಭಾನುವಾರ ಮಾತನಾಡಿದ ಅವರು, ಜಿ-20 ಶೃಂಗದ ಬಗ್ಗೆ ಪ್ರಸ್ತಾಪಿಸಿದರು. ತೆಲಂಗಾಣದ ಹರಿಪ್ರಸಾದ್‌ ಅವರು ಜಿ20 ಶೃಂಗದ ಲಾಂಛನವನ್ನು ಒಳಗೊಂಡಿರುವ ನೇಯ್ಗೆಯ ಬಟ್ಟೆಯನ್ನು ಕೈಯಾರೆ ತಯಾರಿಸಿ ಕಳಿಸಿದ್ದಾರೆ. ಜತೆಗೆ ಪತ್ರವನ್ನೂ ಬರೆದಿದ್ದಾರೆ. ಬಹಳ ಸೊಗಸಾಗಿರುವ ಇದನ್ನು ನೋಡಲು ಖುಷಿಯಾಗುತ್ತಿದೆ. ಎಲ್ಲರೂ ಇದೇ ರೀತಿ ಜಿ20 ಜತೆಗೆ ತಮ್ಮನ್ನು ಗುರುತಿಸಿಕೊಳ್ಳಬಹುದು ಎಂದರು.

ಜಿ20 ಒಕ್ಕೂಟದಲ್ಲಿ ವಿಶ್ವದ ಮೂರನೇ ಎರಡರಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶಗಳು ಕೈ ಜೋಡಿಸುತ್ತಿವೆ. ವಿಶ್ವ ವ್ಯಾಪಾರದ ನಾಲ್ಕನೇ ಮೂರರಷ್ಟು ಹಾಗೂ ಜಿಡಿಪಿಯಲ್ಲಿ ವಿಶ್ವದ 85%ರಷ್ಟು ಪ್ರಾತಿನಿಧ್ಯವಿದೆ. ಇಂಥ ಅತಿ ದೊಡ್ಡ ಸಮೂಹದ ಸಾರಥ್ಯವನ್ನು ಭಾರತ ವಹಿಸುತ್ತಿರುವುದು ದೊಡ್ಡ ಗೌರವವಾಗಿದೆ ಎಂದರು.

ಜನತೆ, ವಿದ್ಯಾರ್ಥಿಗಳು ಏನು ಮಾಡಬಹುದು?

ಜಿ-20 ಶೃಂಗದ ನೂತನ ಅಧ್ಯಕ್ಷತೆಯನ್ನು ಭಾರತ ಡಿಸೆಂಬರ್ 1ರಿಂದ ವಹಿಸಿಕೊಳ್ಳುತ್ತಿದೆ. ದೇಶ ಸ್ವಾತಂತ್ರ್ಯಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದು ಲಭಿಸಿರುವುದು ಐತಿಹಾಸಿಕ. ಇದು ದೊಡ್ಡ ಜವಾಬ್ದಾರಿಯೂ ಆಗಿದೆ. ಲೋಕದ ಸಮಸ್ತರ ಶಾಂತಿ, ಸಮೃದ್ಧಿಯನ್ನು ಬಯಸುವ ಭಾರತ ಪ್ರಮುಖ ಹೊಣೆಗಾರಿಕೆಯನ್ನೂ ವಹಿಸಲಿದೆ. ಭಾರತದ ನೇತೃತ್ವದಲ್ಲಿ ನಡೆಯಲಿರುವ ಜಿ20 ಶೃಂಗದ ಜತೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಶಾಲೆ-ಕಾಲೇಜುಗಳಲ್ಲಿ ಇದರ ಬಗ್ಗೆ ಚರ್ಚೆ-ಸಂವಾದಗಳು ನಡೆಯಬೇಕು. ಕಲಾವಿದರು ಜಿ-20 ಶೃಂಗ ಕುರಿತ ಕಲಾಕೃತಿಗಳನ್ನು ತಯಾರಿಸಬಹುದು. ಜಿ20 ವೆಬ್‌ ಸೈಟ್‌ ಅನ್ನು ಈ ನಿಟ್ಟಿನಲ್ಲಿ ವೀಕ್ಷಿಸಬಹುದು ಎಂದು ವಿವರಿಸಿದರು.

ಮನ್‌ ಕಿ ಬಾತ್‌ ಶತದಿನೋತ್ಸವದತ್ತ ಮುನ್ನಡೆಯುತ್ತಿದೆ. ಇದು ಶತಕೋಟಿ ಭಾರತೀಯರ ಜತೆಗೆ ಸಂವಹನಕ್ಕೆ ಮಾಧ್ಯಮವಾಗಿದೆ. ಇದು ನನಗಂತೂ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ನವೆಂಬರ್‌ 18ರಂದು ದೇಶದ ಮೊದಲ ಖಾಸಗಿ ರಾಕೆಟ್‌ ಅನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡಾಯಿಸಿರುವುದು ಗಮನಾರ್ಹ ಎಂದು ವಿವರಿಸಿದರು.

ಸಂಗೀತ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಮನವಿ

ಸಂಗೀತ ಸಮಾಜವನ್ನು ಒಗ್ಗೂಡಿಸುತ್ತದೆ. ಭಾರತದ ಸಂಗೀತ ವಾದ್ಯಗಳು, ಉಪಕರಣಗಳು ಈಗ ವಿಶ್ವದ ನಾನಾ ದೇಶಗಳಲ್ಲಿ ಬಹು ಬೇಡಿಕೆ ಗಳಿಸುತ್ತಿವೆ. ಹೀಗಾಗಿ ಇವುಗಳ ರಫ್ತು ಗಣನೀಯ ವೃದ್ಧಿಸಿದೆ. ದೇಶಾದ್ಯಂತ ಭಜನಾ ಮಂಡಳಿಗಳು ಸಂಗೀತವನ್ನು ಪ್ರಚುರಪಡಿಸುತ್ತಿವೆ. ನಮ್ಮ ದೇಶ ಪ್ರಾಚೀನ ಸಂಸ್ಕೃತಿಯನ್ನು ಈಗಲೂ ಸಮೃದ್ಧವಾಗಿ ಉಳಿಸಿಕೊಂಡಿದೆ. ಅದನ್ನು ಜತನವಾಗಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ಅಸ್ಮಿತೆಯನ್ನು ಉಳಿಸಿಕೊಳ್ಳಲೇಬೇಕು ಎಂದರು.

ನಾಗಾಲ್ಯಾಂಡ್‌ನ ಸಾಂಪ್ರದಾಯಿಕ ನೃತ್ಯ, ಬಿದಿರಿನ ಕಲಾಕೃತಿಗಳು, ಉಡುಪುಗಳನ್ನು ಸ್ಮರಿಸಿದ ಪ್ರಧಾನಿ ಮೋದಿಯವರು, ಇಂಥ ಸ್ಥಳೀಯ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಯತ್ನಿಸಬೇಕು. ಅಂಥ ಪ್ರಯತ್ನ ನಡೆಯುತ್ತಿದ್ದರೆ ನನಗೂ ಅಗತ್ಯವಾಗಿ ತಿಳಿಸಿ ಎಂದು ಮನವಿ ಮಾಡಿದರು.

ಶಾಲಾ ಮಕ್ಕಳಿಗೆ ಗ್ರಂಥಾಲಯ ಕಲ್ಪಿಸಿದ ಜಾರ್ಖಂಡ್‌ನ ಸಂಜಯ್

ವಿದ್ಯಾದಾನ ಸಮಾಜಕ್ಕೆ ನೀಡುವ ಅತಿ ದೊಡ್ಡ ಕೊಡುಗೆಯಾಗಿದೆ. ಇದರಿಂದ ಸಮಾಜದ ಕಲ್ಯಾಣ ಸಾಧ್ಯ ಎಂದರು. ಜಾರ್ಖಂಡ್‌ನ ಹಲವು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸಿರುವ ಸಂಜಯ್‌ ಅವರ ಕೊಡುಗೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಸಂಜಯ್‌ ಅವರ ಈ ಪ್ರಯತ್ನವು ಸಾಮಾಜಿಕ ಅಭಿಯಾನವಾಗುತ್ತಿದೆ ಎಂದರು.


Exit mobile version