ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ 90 ನೇ ಆವೃತ್ತಿ ಇಂದು ಪ್ರಸಾರವಾಯಿತು. 1975ರಲ್ಲಿ ಇದೇ ದಿನ ಅಂದಿನ ಪ್ರಧಾನಿ ಇಂದಿರಾಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದ್ದರು. ಅದೇ ವಿಷಯದೊಂದಿಗೆ ಇಂದು ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಪ್ರಾರಂಭಿಸಿದರು. ʼ47 ವರ್ಷಗಳ ಹಿಂದೆ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅವಮಾನ. ಕೊನೆಗೂ ಅಂಥ ಸರ್ವಾಧಿಕಾರಿ ಮನಸ್ಥಿತಿಯವರನ್ನು ಈ ದೇಶದ ಜನರು ಪ್ರಜಾಪ್ರಭುತ್ವ ಮಾರ್ಗದಲ್ಲೇ ಸಾಗಿ ಸೋಲಿಸಿದ್ದಾರೆ. ಸರ್ವಾಧಿಕಾರಿ ಧೋರಣೆಯನ್ನು ಪ್ರಜಾಸತ್ತಾತ್ಮಕವಾಗಿ ಸೋಲಿಸಿದ ಇಂಥ ಉದಾಹರಣೆಗಳು ಜಗತ್ತಿನಲ್ಲಿ ಸಿಗುವುದು ತುಂಬ ಅಪರೂಪ ʼ ಎಂದು ಹೇಳಿದರು.
ಈ ದೇಶದ ಯುವಕರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮ್ಮನ್ನು ಹೆತ್ತವರು ಯುವಕರಾಗಿದ್ದ ಸಂದರ್ಭದಲ್ಲಿ ಆಗಿದ್ದ ಸರ್ಕಾರ ಅವರ ಬದುಕುವ ಹಕ್ಕನ್ನೇ ಕಸಿದುಕೊಂಡಿತ್ತು ಎಂಬುದು ನಿಮಗೆ ಗೊತ್ತಿದೆಯಾ? 1975ರ ಜೂನ್ ತಿಂಗಳಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯಿಂದ ಅವರೆಷ್ಟು ಕಷ್ಟಪಟ್ಟರು ಎಂಬುದನ್ನು ತಿಳಿದಿದ್ದೀರಾ? ಎಂದು ಪ್ರಶ್ನಿಸಿದ ಪ್ರಧಾನಿ ನರೇಂದ್ರ ಮೋದಿ, ʼಎಮರ್ಜನ್ಸಿ ಹೇರಲಾಗಿದ್ದ ಅವಧಿಯಲ್ಲಿ ಪ್ರತಿ ನಾಗರಿಕನ ಎಲ್ಲ ಹಕ್ಕುಗಳನ್ನೂ ನಿರ್ಬಂಧಿಸಲಾಗಿತ್ತು. ವೈಯಕ್ತಿಕ ಸ್ವಾತಂತ್ರ್ಯವನ್ನೂ ಕಸಿಯಲಾಗಿತ್ತು. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಪಡಿಸುವ ಎಲ್ಲ ಪ್ರಯತ್ನಗಳೂ ನಡೆದಿದ್ದವುʼ ಎಂದು ಹೇಳಿದರು.
ಖ್ಯಾತ ಗಾಯಕ ಕಿಶೋರ್ ಕುಮಾರ್ ಆಗಿನ ಸರ್ಕಾರವನ್ನು ಹೊಗಳಲಿಲ್ಲ ಎಂಬ ಕಾರಣಕ್ಕೆ ಅವರಿಗೂ ನಿರ್ಬಂಧ ವಿಧಿಸಲಾಯಿತು. ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಬ್ಯಾನ್ ಮಾಡಲಾಯಿತು. ಇಷ್ಟೇ ಅಲ್ಲ, ಅನೇಕರನ್ನು ಸುಮ್ಮನೆ ಬಂಧಿಸಲಾಯಿತು. ಪ್ರಜಾಪ್ರಭುತ್ವ ನಾಶಕ್ಕೆ ಮಾಡಬೇಕಾದ್ದನ್ನೆಲ್ಲ ಮಾಡಿದರು. ಅಷ್ಟಾದರೂ ಈ ದೇಶದ ಪ್ರಜೆಗಳು ಡೆಮಾಕ್ರಸಿಯ ಮೇಲಿಟ್ಟ ನಂಬಿಕೆಯ ಒಂದಿಂಚನ್ನೂ ಕದಲಿಸಲು ಸಾಧ್ಯವಾಗಲಿಲ್ಲ ಎಂದ ನರೇಂದ್ರ ಮೋದಿ, ʼಕೊನೆಗೂ ಪ್ರಜಾಸತ್ತಾತ್ಮಕ ಮೌಲ್ಯಗಳೇ ಗೆದ್ದವು. ಭಾರತೀಯರು ತುರ್ತು ಪರಿಸ್ಥಿತಿಯನ್ನು ತೊಡೆದು ಹಾಕಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದರುʼ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: ನರೇಂದ್ರ ಮೋದಿ ವಿಷಕಂಠನಿದ್ದಂತೆ, ಅವರ ನೋವನ್ನು ನಾನು ಹತ್ತಿರದಿಂದ ಬಲ್ಲೆ: ಗೃಹ ಸಚಿವ ಅಮಿತ್ ಶಾ
ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭಿವೃದ್ಧಿ
ನಮ್ಮ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಗತಿ ಸಾದಿಸುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಬಾರಿಯ ಮನ್ ಕೀ ಬಾತ್‌ನಲ್ಲಿ ಉಲ್ಲೇಖಿಸಿದರು. ʼಕಳೆದ ಕೆಲವು ವರ್ಷಗಳಿಂದಲೂ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆ ಮಾಡಲಾಗುತ್ತಿದೆ. ಹೊಸ ಮೈಲಿಗಲ್ಲುಗಳ ಸ್ಥಾಪನೆಯಾಗುತ್ತಿದೆ. ಇನ್-ಸ್ಪೇಸ್ ಎಂಬ ಒಂದು ಏಜೆನ್ಸಿ ರಚನೆ ಮಾಡುವ ಮೂಲಕ ಸಾಧನೆಯತ್ತ ಸಾಗಲಾಗುತ್ತಿದೆʼ ಎಂದು ಹೇಳಿದರು.
ಖೇಲೋ ಇಂಡಿಯಾ ಯುತ್ ಗೇಮ್ಸ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ʼಈ ಬಾರಿ ನಡೆದ ಖೇಲೋ ಇಂಡಿಯಾದಲ್ಲಿ ಹಲವು ಅಥ್ಲೀಟ್‌ಗಳು ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದ್ದಾರೆ. ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಹಾಗೇ, ಜೂ.14ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೋ ನೂರ್ಮಿ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾರನ್ನು ಶ್ಲಾಘಿಸಿದರು ಮತ್ತು ಇತ್ತೀಚೆಗೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್‌ಗೂ ಗೌರವ ಅರ್ಪಿಸಿ, ಕೃತಜ್ಞತೆ ಸಲ್ಲಿಸಿದರು.
ನವೋದ್ಯಮದಲ್ಲಿ ಸಾಧನೆ
ದೇಶ ನವೋದ್ಯಮ (ಸ್ಟಾರ್ಟ್-ಅಪ್) ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯ ಬಗ್ಗೆಯೂ ಮನ್ ಕೀ ಬಾತ್‌ನಲ್ಲಿ ಶ್ಲಾಘಿಸಿದರು. ಜೂ.5ರಂದು ನಮ್ಮ ದೇಶದ ಯುನಿಕಾರ್ನ್‌ಗಳ ಸಂಖ್ಯೆ 100 ತಲುಪಿತು. ಈ ಎಲ್ಲ ಯೂನಿಕಾರ್ನ್‌ಗಳ ಮೌಲ್ಯ 330 ಬಿಲಿಯನ್ ಡಾಲರ್‌ಗಳಷ್ಟು. ಅಂದರೆ 25 ಲಕ್ಷ ಕೋಟಿ ರೂಪಾಯಿ. ನಿಜಕ್ಕೂ ಇದು ಇಡೀ ದೇಶ ಹೆಮ್ಮೆ ಪಡುವ ವಿಷಯ. ಭಾರತದಲ್ಲಿ ಸ್ಟಾರ್ಟ್ ಅಪ್‌ಗಳ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: G7 Summit: ಜರ್ಮನಿ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಎಸಿ ಇಲ್ಲದ ಹೋಟೆಲ್‌ನಲ್ಲಿ ಶೃಂಗಸಭೆ !