ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕೀ ಬಾತ್ (Mann Ki Baat) ರೇಡಿಯೊ ಸರಣಿಯ 110ನೇ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶೀಸಿ ಮಾತನಾಡಿದ್ದಾರೆ. ನಾರಿಶಕ್ತಿ, ತಂತ್ರಜ್ಞಾನ, ಜಲ ಸಂರಕ್ಷಣೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದ ಮೋದಿ, ಕರ್ನಾಟಕದ (Karnataka) ಬಾಗಲಕೋಟೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗೆಟ್ಕರ್ ಅವರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
“ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗೆಟ್ಕರ್ ಅವರು ಸಾವಿರಕ್ಕೂ ಅಧಿಕ ಜನಪದ (ಗೊಂದಲಿ) ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಹಾಗೆಯೇ, ಸಾವಿರಾರು ಜನರಿಗೆ ಇವರು ಒಂದು ರೂಪಾಯಿಯನ್ನೂ ಪಡೆಯದೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ” ಎಂದು ತಿಳಿಸಿದರು.
Great to see countless people selflessly making efforts to preserve Indian culture and traditions. The efforts of citizens in Jammu and Kashmir, Arunachal Pradesh and Karnataka inspire everyone…#MannKiBaat pic.twitter.com/4NBpaS2BNh
— PMO India (@PMOIndia) February 25, 2024
ಬೆಂಗಳೂರಿನ ಕಂಪನಿ ಕುರಿತು ಮೆಚ್ಚುಗೆ
ವನ್ಯಜೀವಿ ಸಂರಕ್ಷಣೆ ಕುರಿತು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ ಬೆಂಗಳೂರಿನ ಕಂಪನಿಯನ್ನು ಅವರು ಬಣ್ಣಿಸಿದರು. ಹಾಗೆಯೇ, ಕಂಪನಿ ಅಭಿವೃದ್ಧಿಪಡಿಸಿದ ಬಘೀರ (Bagheera) ಹಾಗೂ ಗರುಡ (Garud) ಎಂಬ ಆ್ಯಪ್‌ಗಳ ಕುರಿತು ನರೇಂದ್ರ ಮೋದಿ ಮಾಹಿತಿ ನೀಡಿದರು.
“ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನಾಚರಣೆ ಇದೆ. ಎಲ್ಲರೂ ವನ್ಯಜೀವಿಗಳ ರಕ್ಷಣೆಗೆ ಆದ್ಯತೆ ನೀಡೋಣ. ವನ್ಯಜೀವಿ ರಕ್ಷಣೆಯಲ್ಲೂ ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಕಂಪನಿಯೊಂದು ಬಘೀರ ಹಾಗೂ ಗರುಡ ಎಂಬ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳಿಂದ ವನ್ಯಜೀವಿಗಳನ್ನು ರಕ್ಷಣೆ ಮಾಡಬಹುದಾಗಿದೆ” ಎಂದು ತಿಳಿಸಿದರು.
“ಬಘೀರ್ ಆ್ಯಪ್ ಮೂಲಕ ಅರಣ್ಯದಲ್ಲಿ ಸಫಾರಿ ಮಾಡುವ ವಾಹನಗಳ ವೇಗದ ಮೇಲೆ ನಿಗಾ ಇರಿಸುತ್ತದೆ. ಅರಣ್ಯ ಪ್ರದೇಶದ ಹಲವು ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಆ್ಯಪ್ ಸಹಕಾರಿಯಾಗಿದೆ. ದೇಶದ ಹಲವು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಆ್ಯಪ್‌ಅನ್ನು ಬಳಸಲಾಗುತ್ತಿದೆ. ಗರುಡ ಆ್ಯಪ್‌ಅನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಯಾವುದೇ ಸಿಸಿಟಿವಿಗೆ ಕನೆಕ್ಟ್ ಮಾಡಬಹುದಾಗಿದೆ. ಇದರಿಂದ ವನ್ಯಜೀವಿಗಳ ಚಲನವಲನ ಸೇರಿ ಹಲವು ಮಾಹಿತಿಯನ್ನು ಅಲರ್ಟ್ ಮೂಲಕ ಪಡೆಯಬಹುದಾಗಿದೆ” ಎಂದು ಮಾಹಿತಿ ನೀಡಿದರು.
In the 110th edition of 'Mann ki Baat’, PM Modi says, "We have been living in a spirit of coexistence with nature and wildlife for thousands of years. You will be able to experience this yourself. If you ever go to Melghat Tiger Reserve in Maharashtra. Tribal families living in… pic.twitter.com/ryw2C0xqie
— ANI (@ANI) February 25, 2024
ಮೋದಿ ಮನ್ ಕೀ ಬಾತ್ ಹೈಲೈಟ್ಸ್
- ದೇಶದಲ್ಲಿ ನಾರಿಶಕ್ತಿಯು ಪ್ರತಿಯೊಂದು ಕ್ಷೇತ್ರಗಳಲ್ಲೂ ಪ್ರಜ್ವಲಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲೂ ಹೆಣ್ಣುಮಕ್ಕಳು ಡ್ರೋನ್ ಹಾರಿಸುತ್ತಿದ್ದಾರೆ. ನಮೋ ಡ್ರೋನ್ ದೀದಿ ಕಾರ್ಯಕ್ರಮ ಯಶಸ್ವಿಯಾಗಿದೆ.
- ಡ್ರೋನ್ ಮೂಲಕ ಕೃಷಿ, ಸಾವಯವ ಕೃಷಿ, ಜಲ ಸಂರಕ್ಷಣೆಯಲ್ಲಿ ಉತ್ತರ ಪ್ರದೇಶ ಯುವತಿ ಸುನೀತಾ, ಮಹಾರಾಷ್ಟ್ರದ ಕಲ್ಯಾಣಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
- ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿ ತೊಡಗಿದ್ದ ಜಯಂತಿ ಮಹಾಪಾತ್ರ, ವಿರೇನ್ ಸಾಹು ದಂಪತಿಯು ಒಡಿಶಾದಲ್ಲಿ ಕುರಿ ಸಾಕಣೆ ಮಾಡಿದ್ದಾರೆ. ಮಾಣಿಕಸ್ತು ಆಡು ಬ್ಯಾಂಕ್ ಸ್ಥಾಪಿಸಿ, ರೈತರು ಆಡು, ಮೇಕೆಗಳ ಸಾಕಣೆಗೆ ಉತ್ತೇಜನ ನೀಡಿದ್ದಾರೆ.
- ಭಾರತವು ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳಿಂದ ಶ್ರೀಮಂತವಾಗಿದೆ. ಬೇರೆಯವರಿಗೆ ಸಹಾಯ ಮಾಡುವುದನ್ನೂ ನಾವು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ.
- ಮೊದಲ ಬಾರಿ ಮತದಾನ ಮಾಡುತ್ತಿರುವವರು ದೇಶದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಪ್ಪದೆ ಮತದಾನ ಮಾಡಬೇಕು. ದೇಶದ ಗಣ್ಯರು, ಸೆಲೆಬ್ರಿಟಿಗಳು ಕೂಡ ಈ ಕುರಿತು ಜಾಗೃತಿ ಮೂಡಿಸಬೇಕು.
ಇದನ್ನೂ ಓದಿ: 22 ವರ್ಷಗಳ ಹಿಂದೆ ಮೋದಿ ಮೊದಲ ಬಾರಿ ಶಾಸಕರಾದಾಗ ಏನು ಮಾಡಿದರು? ವಿಡಿಯೊ ಇಲ್ಲಿದೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ