ನವ ದೆಹಲಿ: ಜೂನ್-ಜುಲೈ ಎಂದರೆ ಮುಂಗಾರು ಮಾರುತದ ಅವಧಿ. ಯಮುನಾ ನದಿ ಸೇರಿದಂತೆ ಹಲವಾರು ನದಿ ಪ್ರದೇಶಗಳಲ್ಲಿ ಜನರಿಗೆ ಸಂಕಷ್ಟವಾಗಿದೆ. ದೇಶದ ಪಶ್ಚಿಮ ಭಾಗ ಹಾಗೂ ಉತ್ತರದ ವಲಯದಲ್ಲಿ ಭಾರಿ ಮಳೆ, ಸೈಕ್ಲೋನ್ ಪರಿಣಾಮ ಜನತೆಗೆ ಸಂಕಷ್ಟವಾಗಿದೆ. ಆದರೂ, ಪ್ರಾಕೃತಿಕ ವಿಕೋಪ ಎದುರಿಸಲು ಭಾರತ ಹಿಂದೆಂದಿಗಿಂತ ಹೆಚ್ಚು ಸಜ್ಜಾಗಿದೆ. ಈಗ ಗಿಡ ಮರಗಳನ್ನು ನೆಟ್ಟು ವೃಕ್ಷ ಸಂರಕ್ಷಣೆ, ಜಲ ಸಂರಕ್ಷಣೆ ಮಾಡಬೇಕಾದ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ (Mann Ki Baat) ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವದ ಸಂದರ್ಭ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ತಮ್ಮ ನೆಚ್ಚಿನ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಮನವಿ ಮಾಡಿದ್ದಾರೆ. ಹರ್ ಘರ್ ತಿರಂಗಾ (Har Ghar Tiranga) ಸಂಪ್ರದಾಯವನ್ನು ಮುಂದುವರಿಸಲು ಕರೆ ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 103ನೇ ಮನ್ ಕಿ ಬಾತ್‌ನಲ್ಲಿ ಮಾತನಾಡಿ, ಭಾರತೀಯರ ಕಠಿಣ ಪರಿಶ್ರಮ, ಬುದ್ಧಿವಂತಿಕೆ, ಕೌಶಲಗಳು, ಸಾಹಸ ಪ್ರವೃತ್ತಿ ಅನನ್ಯ. ಎರಡು ದಶಕಗಳ ಹಿಂದೆ ಗುಜರಾತಿನ ಕಛ್ ಜಿಲ್ಲೆ ಭೀಕರ ಭೂಕಂಪಕ್ಕೀಡಾಗತ್ತು. ಇನ್ನೆಂದಿಗೂ ಕಛ್ ಸುಧಾರಣೆ ಆಗದು ಎಂದು ಭಾವಿಸಲಾಗಿತ್ತು. ಆದರೆ ಕಛ್ ಈಗ ಹೇಗೆ ಚೇತರಿಸಿದೆ ಎಂದರೆ ದೇಶದ ವಿಕಸಿತ ಜಿಲ್ಲೆಗಳಲ್ಲಿ ಇದೂ ಒಂದಾಗಿದೆ.
Sharing this month's #MannKiBaat. Do tune in! https://t.co/z1YYe9E7w2
— Narendra Modi (@narendramodi) July 30, 2023
ಪ್ರಾಕೃತಿಕ ವಿಕೋಪಗಳನ್ನು ನಿಯಂತ್ರಿಸುವುದು ಯಾರ ಕೈಯಲ್ಲೂ ಇಲ್ಲ. ಆದರೆ ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಭಾರತ ಅಂಥ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಿದೆ. ಇತ್ತೀಚೆಗೆ ದೇಶದ ಪಶ್ಚಿಮ ಭಾಗದಲ್ಲಿ ಭೀಕರ ಸೈಕ್ಲೋನ್ ಅಪ್ಪಳಿಸಿತ್ತು. ಹೀಗಿದ್ದರೂ ಕಛ್ ಇಂಥ ಸೈಕ್ಲೋನ್ ಅನ್ನೂ ಯಶಸ್ವಿಯಾಗಿ ಎದುರಿಸಿದೆ. ಇತರ ಸೈಕ್ಲೋನ್ ಪೀಡಿತ ಪ್ರದೇಶಗಳೂ ಶೀಘ್ರ ಚೇತರಿಸುವ ವಿಶ್ವಾಸ ಇದೆ ಎಂದರು.
ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ವಿಧಾನಗಳಲ್ಲಿ ಪ್ರಕೃತಿಯ ಸಂರಕ್ಷಣೆಯೂ ಒಂದು. ಈ ಹಿಂದಿನ ಮನ್ ಕಿ ಬಾತ್‌ನಲ್ಲಿ ನೀರಿನ ಸಂರಕ್ಷಣೆಯಲ್ಲಿ ತೊಡಗಿಸಿರುವ ಸ್ಟಾರ್ಟಪ್‌ಗಳ ಬಗ್ಗೆ ಚರ್ಚಿಸಲಾಗಿತ್ತು. ನೈಋತ್ಯ ಮುಂಗಾರಿನ ಸಂದರ್ಭ ದೇಶವಾಸಿಗಳ ರಕ್ಷಣೆಯೂ ದೊಡ್ಡದು. ಉತ್ತರಪ್ರದೇಶದ ಬಾಂದ್ರಾ, ಬುಂದೇಲ್ ಖಂಡ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚು. ಬಾಂದ್ರಾ ಜಿಲ್ಲೆಯ ಲುಕ್ತರಾ ಗ್ರಾಮದ ಪಂಚಾಯಿತಿ ಮುಖ್ಯಸ್ಥ ತುಳಸಿ ರಾಮ್ ಯಾದವ್ ಜಿ ಬಗ್ಗೆ ಪ್ರಧಾನಿ ಸ್ಮರಿಸಿದರು. ನೀರಿನ ಸಮಸ್ಯೆ ನೀಗಿಸಲು ತುಳಸಿ ರಾಮ್ ಅವರು ಗ್ರಾಮಗಳಲ್ಲಿ 40ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದಾರೆ. ಈ ಕೆಲಸ ಪರಿಣಾಮಕಾರಿಯಾಗಿದೆ. ಅಂತರ್ಜಲದ ಮಟ್ಟ ಸುಧಾರಿಸಿದೆ.
ನದಿಯ ಪುನರುಜ್ಜೀವನ: ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನೀಮ್ ಎಂಬ ನದಿ ಇತ್ತು. ಕ್ರಮೇಣ ಮರೆಯಾಗಿತ್ತು. ಆದರೆ ಜನ ಮರೆತಿರಲಿಲ್ಲ. ಎಲ್ಲರೂ ಸೇರಿ ನದಿಯ ಪುನರುಜ್ಜೀವನ ಕಾಯಕಲ್ಪ ಕೈಗೊಂಡರು. ನದಿ, ಸರೋವರ ಕೇವಲ ನೀರಿನ ತಾಣವಲ್ಲ, ಜನ ಜೀವನದ ಮೂಲ ದ್ರವ್ಯವೂ ಹೌದು ಎಂದು ಪ್ರಧಾನಿ ಹೇಳಿದರು. ನದಿಯ ಉಗಮ ಸ್ಥಳದಲ್ಲಿ ಅಮೃತ ಸರೋವರ ನಿರ್ಮಿಸಲಾಗಿದೆ.
ಮಹಾರಾಷ್ಟ್ರದ ಜಿಲ್ಲೆಯೊಂದರಲ್ಲಿ 53 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ನಿಲ್‌ವಂಡೆ ಕಾಲುವೆಯ ಕಾಮಗಾರಿ ಮುಕ್ತಾಯವಾಗಿದೆ. ಈ ಯೋಜನೆಯನ್ನು 1970ರಲ್ಲಿ ಅಂದಾಜು 7.9 ಕೋಟಿ ರೂ.ಗಳ ವೆಚ್ಚದೊಂದಿಗೆ ಅನುಮೋದಿಸಲಾಗಿತ್ತು. ನಾಸಿಕ್ ವಲಯದ ಆರು ತಾಲ್ಲೂಕಿನಲ್ಲಿ ನೀರಿನ ಕೊರತೆಯನ್ನು ಈ ಕಾಲುವೆ ನೀಗಿಸಲಿದೆ. (ಈಗ ಯೋಜನೆಗೆ 5,177 ಕೋಟಿ ರೂ. ವೆಚ್ಚ) ಇತ್ತೀಚೆಗೆ ಪ್ರಾಯೋಗಿಕವಾಗಿ ಕಾಲುವೆಗೆ ನೀರು ಹರಿಸಿದಾಗ ಸ್ಥಳೀಯರು ಹಬ್ಬದಂತೆ ಆಚರಿಸಿದ್ದರು.
ಛತ್ರಪತಿ ಶಿವಾಜಿ ಮಹಾರಾಜರು ಶೌರ್ಯ-ಸಾಹಸಕ್ಕೆ ಹೆಸರಾಗಿದ್ದಲ್ಲದೆ, ಉತ್ತಮ ಆಡಳಿತಗಾರರೂ, ದೂರದೃಷ್ಟಿ ಇರುವ ನಾಯಕರೂ ಆಗಿದ್ದರು. ಜಲ ಸಂರಕ್ಷಣೆಗೆ ಶಿವಾಜಿಯವರು ಪಣ ತೊಟ್ಟಿದ್ದರು. ಶಿವಾಜಿ ಅವರ ನಾಯಕತ್ವದಲ್ಲಿ ಸಮುದ್ರ ಮತ್ತು ನದಿಗಳ ಸಮೀಪದ ಜಲದುರ್ಗ ಕೆರೆ, ಕೋಟೆಗಳು ಶತ ಶತಮಾನಗಳ ಬಳಿಕವೂ ಉಳಿದುಕೊಂಡು ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತವನ್ನು ಕ್ಷಯ ರೋಗದಿಂದ ಮುಕ್ತಗೊಳಿಸಲು ಮಕ್ಕಳು, ಯುವ ಜನತೆ ನೆರವು ನೀಡುತ್ತಾರೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ 7 ವರ್ಷದ ಬಾಲಕಿ ನಳಿನಿ ಸಿಂಗ್ ತನ್ನ ಪಾಕೆಟ್ ಮನಿಯನ್ನು ಬಳಸಿ ಕ್ಷಯ ರೋಗದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾಳೆ. ಟಿಬಿ ರೋಗಿಗಳಿಗೆ ನೆರವು ನೀಡುತ್ತಾಳೆ. ಮಧ್ಯಪ್ರದೇಶದ 13 ವರ್ಷದ ಮೀನಾಕ್ಷಿ, ಪಶ್ಚಿಮ ಬಂಗಾಳದ ಬಶ್ವರ್ ಮುಖರ್ಜಿ ಕೂಡ ಕ್ಷಯ ರೋಗದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಇದು ಸ್ಪೂರ್ತಿ ನೀಡುವಂಥದ್ದು ಎಂದು ಪ್ರಧಾನಿ ವಿವರಿಸಿದರು.
ಜಮ್ಮು ಕಾಶ್ಮೀರದಲ್ಲಿ ಜಿ 20 ಶೃಂಗ ಸಭೆಯ ಕಾರ್ಯಕ್ರಮಗಳಿಂದ ಗಮನ ಸೆಳೆಯುತ್ತದೆ. ಬಾರಾಮುಲ್ಲಾದಲ್ಲಿ ಹಾಲಿನ ಕೊರತೆ ಇತ್ತು. ಈ ಗ್ರಾಮದಲ್ಲಿ ಮಹಿಳೆಯರು ಹೈನೋದ್ಯಮಕ್ಕೆ ತೊಡಗಿಸಿದ್ದಾರೆ. ಇಶ್ರತ್ ನಬಿ ಎಂಬ ಪದವೀಧರೆ ಡೇರಿ ಸ್ಥಾಪಿಸಿದ್ದಾರೆ. ಅದು ದಿನಕ್ಕೆ 150 ಲೀಟರ್ ಹಾಲು ಮಾರಾಟ ಮಾಡುತ್ತದೆ.
ಇತ್ತೀಚೆಗೆ ಅಮೆರಿಕ್ಕೆ ಹೋಗಿದ್ದಾಗ ಭಾರತದ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ತರಲಾಯಿತು. ದೇಶದ ಪ್ರಾಚೀನ ಸಂಸ್ಕೃತಿ ಬಗ್ಗೆ ತಿಳಿಯಲ ಇದು ಅನುಕೂಲಕರ. ಪಂಜಾಬ್‌ನಲ್ಲಿ ಮಾದಕ ದ್ರವ್ಯಗಳಿಂದ ಯುವ ಜನತೆಯನ್ನು ಪಾರು ಮಾಡಲು ಅಭಿಯಾನ ಕೈಗೊಳ್ಳಲಾಗಿದೆ. ಭವಿಷ್ಯದ ಪೀಳಿಗೆಗೋಸ್ಕರ 2020ರ ಆಗಸ್ಟ್ 15ರಂದು ಇದಕ್ಕಾಗಿ ಅಭಿಯಾನ ಕೈಗೋಳ್ಳಲಾಗಿದೆ.
ಮಿನಿ ಬ್ರೆಜಿಲ್ : ಮಧ್ಯಪ್ರದೇಶದ ಬಿಚಾರ್‌ಪುರ್ ಗ್ರಾಮವನ್ನು ಮಿನಿ ಬ್ರೆಜೆಲ್ ಎಂದು ಕರೆಯುತ್ತಾರೆ. ಈ ಗ್ರಾಮವು ಫುಟ್ಬಾಲ್‌ಗೆ ವಿಶೇಷ ಗಮನ ನೀಡುತ್ತಿರುವುದು ಇದಕ್ಕೆ ಕಾರಣ. ಎರಡು ದಶಕಗಳ ಹಿಂದೆ ಈ ಕುರಿತ ಅಭಿಯಾನ ಕೈಗೊಳ್ಳಲಾಗಿತ್ತು. ಈಗ ಫುಟ್ಬಾಲ್ ಕ್ರಾಂತಿಯೇ ಅಲ್ಲಿ ಆರಂಭವಾಗಿದೆ. ವಿಶ್ವ ದರ್ಜೆಯ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಅವರ ಅನ್ವೇಷಣೆ ಮತ್ತು ತರಬೇತಿ ಮುಖ್ಯ ಎಂದರು.
ಇದನ್ನೂ ಓದಿ: PM Narendra Modi Interview: ಜಾಗತಿಕ ನಾಯಕತ್ವ ವಹಿಸಲು ಭಾರತ ಸಿದ್ಧ: ಫ್ರಾನ್ಸ್ ಪತ್ರಿಕೆಗೆ ನರೇಂದ್ರ ಮೋದಿ ವಿಶೇಷ ಸಂದರ್ಶನ
ಅಮೃತ ಮಹೋತ್ಸವ ಆಚರಣೆ: ನಾವು ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಪೂರ್ಣಗೊಳಿಸಿದ್ದೇವೆ. ದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಸಲಾಗಿತ್ತು. ದೇಶದ ರಕ್ಷಣೆಯಲ್ಲಿ ಹುತಾತ್ಮರಾದವರನ್ನು ಗೌರವಿಸಲು ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ದೇಶದಲ್ಲಿ ಅಮೃತ್ ಕಲಶ್ ಯಾತ್ರಾ ನಡೆಯಲಿದೆ. ದೇಶದ ಮೂಲೆ ಮೂಲೆಗಳಿಂದ 7,500 ಕಲಶಗಳಲ್ಲಿ ಮಣ್ಣನ್ನು ತುಂಬಿ ದಿಲ್ಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಅಮೃತ್ ವಾಟಿಕಾ ನಿರ್ಮಿಸಲಾಗುವುದು. ಇದು ಏಕ್ ಭಾರತ್ ಶ್ರೇಷ್ಠ್ ಭಾರತ್ ಸಂದೇಶ ಬಿಂಬಿಸಲಿದೆ ಎಂದು ಪ್ರಧಾನಿ ವಿವರಿಸಿದರು. ಕಳೆದ ವರ್ಷದಂತೆ ಈ ಸಲವೂ ಆಗಸ್ಟ್ 15ರಂದು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ಆಚರಿಸೋಣ ಎಂದರು.