ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್‌ನ 100ನೇ ವಿಶೇಷ ಸಂಚಿಕೆಯಲ್ಲಿ (Mann Ki Baat) ಹರಿಯಾಣ ಮೂಲದ ಸಾಮಾಜಿಕ ಕಾರ್ಯಕರ್ತ, ಸೆಲ್ಫಿ ವಿತ್ ಡಾಟರ್ (ಮಗಳೊಂದಿಗೆ ಸೆಲ್ಫಿ) ಅಭಿಯಾನದ ರೂವಾರಿ ಸುನಿಲ್ ಜಗ್‌ಲಾನ್ ಜತೆಗೆ ಕುಶಲೋಪರಿ ನಡಸಿದರು. ಇವತ್ತಿನ ಮನ್ ಕೀ ಬಾತ್ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲೂ ಪ್ರಸಾರವಾಯಿತು.
ಸೆಲ್ಫಿ ವಿತ್ ಡಾಟರ್ ಅಭಿಯಾನವು ಕೇವಲ ತಂತ್ರಜ್ಞಾನ ಆಧರಿತ ಕ್ಯಾಂಪೇನ್ ಅಲ್ಲ, ಬೇರಾವುದೂ ಅಲ್ಲ, ಅದು ಪುತ್ರಿಯರಿಗೆ ವಿಶೇಷವಾದ ಅಭಿಯಾನ ಆಗಿತ್ತು ಎಂದು ಮೋದಿ ಹೇಳಿದರು. ಬೇಟಿ-ಪಡಾವೊ, ಬೇಟಿ ಬಚಾವೊ (Beti-Padhao, Bet-Bachao) ಅಭಿಯಾನದ ಪ್ರೇರಣೆಯಿಂದ ಸುನಿಲ್ ಜಗ್‌ಲಾನ್ ಅವರು ಕೈಗೊಂಡಿದ್ದ ಸೆಲ್ಫಿ ವಿತ್ ಡಾಟರ್ ಅಭಿಯಾನ ಎಲ್ಲರಿಗೂ ಮಾದರಿ ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ವಿವರಿಸಿದರು.
ಮೋದಿಯವರು ಸುನಿಲ್ ಜಗ್‌ಲಾನ್ ಅವರ ಪುತ್ರಿಯರ ಬಗ್ಗೆ ವಿಚಾರಿಸಿದರು. ಕೈಸಾ ಹೈ ಬೇಟಿಯಾ? ಕ್ಯಾ ಕರ್ ರಹೇ ಹೈ ಅಭೀ? ( ನಿಮ್ಮ ಪುತ್ರಿಯರು ಹೇಗಿದ್ದಾರೆ, ಈಗೇನು ಮಾಡುತ್ತಿದ್ದಾರೆ) ಎಂದರು. ಅವರು ಚೆನ್ನಾಗಿದ್ದಾರೆ ಎಂದ ಸುನಿಲ್ ಜಗ್‌ಲಾನ್, ಅವರ ತರಗತಿಗಳನ್ನು ತಿಳಿಸಿದರು. ಆ ಮಕ್ಕಳು ಉನ್ನತ ಸಾಧನೆ ಮಾಡಲಿ ಎಂದು ಪ್ರಧಾನಿಯವರು ಶುಭ ಹಾರೈಸಿದರು.
ಸುನಿಲ್ ಜಗ್‌ಲಾನ್ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಇಬ್ಬರು ಪುತ್ರಿಯರು. ಬಾಲಕಿಯರ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅವರು ಶಿಕ್ಷಕ ಹುದ್ದೆಗೆ ರಾಜೀನಾಮೆ ಕೊಟ್ಟು ಗ್ರಾಮದ ಸರಪಂಚ್ ಆದರು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಜನ ಜಾಗೃತಿಗೆ ತಮ್ಮ ಜೀವನ ಮುಡಿಪಾಗಿರಿಸಿದರು. ಗ್ರಾಮದಲ್ಲಿ ಸೆಲ್ಫಿ ವಿತ್ ಡಾಟರ್ ಅಭಿಯಾನ ಆರಂಭಿಸಿದ್ದರು. ಇದು ಪ್ರಧಾನಿಗಳ ಗಮನ ಸೆಳೆದಿತ್ತು. ಮನ್ ಕೀ ಬಾತ್‌ನಲ್ಲಿ ಈ ಹಿಂದೆ ಇದನ್ನು ಮೋದಿ ಪ್ರಸ್ತಾಪಿಸಿದ್ದರು. 2015ರ ಜನವರಿಯಲ್ಲಿ ಆರಂಭವಾದ ಬೇಟಿ ಬಚಾವೊ ಬೇಟಿ ಪಡಾವೊ ಆಂದೋಲನವು ಸೆಲ್ಫಿ ವಿತ್ ಡಾಟರ್ ಕ್ಯಾಂಪೇನ್‌ಗೆ ಪ್ರೇರಣೆಯಾಗಿತ್ತು.
ಏನಿದು ಸೆಲ್ಫಿ ವಿತ್ ಡಾಟರ್ ಕ್ಯಾಂಪೇನ್?
ಸುನಿಲ್ ಜಗ್ ಲಾನ್ ಅವರು ಸೆಲ್ಫಿ ವಿತ್ ಕ್ಯಾಂಪೇನ್‌ನಲ್ಲಿ ಜನತೆಗೆ, ತಮ್ಮ ಪುತ್ರಿಯರ ಜತೆಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತೆ ಕೋರಿದ್ದರು. ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಿದ್ದರು.
2015ಎ ಜನವರಿಯಲ್ಲಿ ಪಾಣಿಪತ್‌ನಲ್ಲಿ ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಆಗ ಹೆಣ್ಣು ಮಕ್ಕಳಿಗಾಗಿ ಏನಾದರೂ ಮಾಡಬೇಕು ಎಂದು ಬಯಸಿದ ಅವರು, ಸೆಲ್ಫಿ ವಿತ್ ಡಾಟರ್ ಅಭಿಯಾನ ಶುರು ಮಾಡಿದರು. ಇದಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ತೆರೆದು ಜನರಿಗೆ ಪುತ್ರಿಯರ ಜತೆಗೆ ಇರುವ ಫೋಟೊಗಳನ್ನು ಕಳಿಸಲು ಸೂಚಿಸಿದರು. ಇದು ಜನಪ್ರಿಯತೆ ಗಳಿಸಿತ್ತು.