ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 101ನೇ ಮನ್ ಕಿ ಬಾತ್ (Mann Ki Baat) ಬಾನುಲಿ ಕಾರ್ಯಕ್ರಮದಲ್ಲಿ ಭಾನುವಾರ, ವೀರ ಸಾವರ್ಕರ್ ಜನ್ಮದಿನದ ಪ್ರಯುಕ್ತ ಅವರ ಬದುಕು-ಸಾಧನೆಯನ್ನು ಸ್ಮರಿಸಿದರು.
ಇಂದು ಮೇ 28ರಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜನ್ಮ ದಿನ. ಅವರ ತ್ಯಾಗ, ಸಾಹಸ, ಹೋರಾಟ, ವಿಶಾಲ ವ್ಯಕ್ತಿತ್ವ, ಸ್ವಾಭಿಮಾನ, ದೃಢತೆ, ಜೀವನದ ಆದರ್ಶಗಳು ಇಂದಿಗೂ ಭಾರತೀಯರನ್ನು ಪ್ರೇರೇಪಿಸುತ್ತವೆ. ನಾನು ಅಂಡಮಾನ್ ನಿಕೋಬಾರ್‌ಗೆ ಹೋಗಿದ್ದಾಗ ಸಾವರ್ಕರ್ ಕಾಲಾಪಾನಿ ಶಿಕ್ಷೆ ಎದುರಿಸಿದ್ದ ಕಾರಾಗೃಹದ ಕೊಠಡಿಗೆ ಭೇಟಿ ನೀಡಿದ್ದೆ. ಆ ದಿನವನ್ನು ಎಂದಿಗೂ ಮರೆಯಲಾರೆ. ಸ್ವಾತಂತ್ರ್ಯ ಆಂದೋಲನದ ಜತೆಗೆ ಸಾಮಾಜಿಕ ಪರಿವರ್ತನೆಗೆ ಅವರ ಕೊಡುಗೆ ಅಮೋಘ ಎಂದು ಪ್ರಧಾನಿ ಮೋದಿ ವಿವರಿಸಿದರು.
ಸಂತ ಕಬೀರ್ ದಾಸರ ಸ್ಮರಣೆ:
ಜೂನ್ 4ರಂದು ಸಂತ ಕಬೀರ್ ದಾಸರ ಜಯಂತಿ ನಡೆಯಲಿದೆ. ಅವರ ಸಂದೇಶಗಳು ಇಂದಿಗೂ ಪ್ರಸ್ತುತ. ಸಮಾಜದ ಎಲ್ಲ ವರ್ಗದ ಜನರೂ ನೀರಿಗಾಗಿ ಕೆರೆ, ಬಾವಿಯನ್ನು ಆಶ್ರಯಿಸುತ್ತಾರೆ. ಎಲ್ಲರಿಗೂ ನೀರು ಸಮಾನ. ಅದು ಬೇರೆ ಬೇರೆಯಾಗಿರುವುದಿಲ್ಲ. ಅದೇ ರೀತಿ ಎಲ್ಲರೂ ಮಾನವರೇ ಎಂಬ ಸಮಾನತೆಯ ಆದರ್ಶವನ್ನು ಸಾರಿದವರು ಕಬೀರರು ಎಂದರು.
ಎನ್‌ಟಿಆರ್ 100ನೇ ಜನ್ಮದಿನಾಚರಣೆ:
ರಾಜಕಾರಣ ಮತ್ತು ಸಿನಿಮಾರಂಗದಲ್ಲಿ ಅಗಾಧ ಸಾಧನೆ ಮಾಡಿರುವ ಎನ್‌ಟಿ ಆರ್ ಅವರ (ಎನ್‌ಟಿ ರಾಮರಾವ್) ನೂರನೇ ಜನ್ಮ ದಿನವನ್ನು ಇಂದು ಆಚರಿಸಲಾಗುತ್ತಿದೆ. ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಮ, ಕೃಷ್ಣರ ಪಾತ್ರಗಳಲ್ಲಿ ಮಿಂಚಿದ್ದಾರೆ. ರಾಜಕಾರಣದಲ್ಲೂ ಅಪಾರ ಸೇವೆ ನೀಡಿದ್ದಾರೆ. ಅವರಿಗೆ ನಮನಗಳು ಎಂದರು.
ಮನ್ ಕೀ ಬಾತ್ 101ನೇ ಸಂಚಿಕೆ:
ಮನ್ ಕೀ ಬಾತ್ 100ನೇ ಸಂಚಿಕೆಯನ್ನು ಪೂರ್ಣಗೊಳಿಸಿ 101ನೇ ಸಂಚಿಕೆಗೆ ಪದಾರ್ಪಣೆ ಮಾಡಿರುವ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು. ಇದು ಮನ್ ಕೀ ಬಾತ್‌ನ ಎರಡನೇ ಸೆಂಚುರಿಯ ಆರಂಭ ಎಂದು ಹೇಳಿದರು. ಜಗತ್ತಿನಾದ್ಯಂತ ಜನತೆ ಮನ್ ಕೀ ಬಾತ್ ಈ ಬಾನುಲಿ ಕಾರ್ಯಕ್ರಮವನ್ನು ಆಲಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ನೂರು ವರ್ಷದ ತಾಯಿಯೊಬ್ಬರು ಆಶೀರ್ವದಿಸಿದ ವಿಡಿಯೊ ಒಂದನ್ನೂ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯುವ ಸಂಗಮದ ಪ್ರಸ್ತಾಪ:
ಕಳೆದ ಸಲ ಮನ್ ಕಿ ಬಾತ್‌ನಲ್ಲಿ ಕಾಶಿ, ತಮಿಳು ಸಂಗಮದ ಬಗ್ಗೆ ಮಾತನಾಡಿದ್ದೆ. ವಾರಾಣಸಿಯಲ್ಲಿ ತಮಿಳು, ತೆಲುಗು ಸಂಗಮ ನಡೆದಿದೆ. ಇದು ಏಕ್ ಭಾರತ್, ಶ್ರೇಷ್ಠ ಭಾರತ್ ಭಾವನೆಯನ್ನು ಉದ್ದೀಪಿಸುತ್ತದೆ. ಈಗ ಯುವ ಸಂಗಮವೂ ನಡೆಯುತ್ತಿದೆ ಎಂದ ಪ್ರಧಾನಿ ಮೋದಿ, ಈ ಅಭಿಯಾನದಲ್ಲಿ ತೊಡಗಿಸಿರುವ ಇಬ್ಬರು ಯುವಕ-ಯುವತಿಯರನ್ನು ದೂರವಾಣಿ ಮೂಲಕ ಮಾತನಾಡಿಸಿದರು. ಅರುಣಾಚಲ ಪ್ರದೇಶದ ಗ್ಯಾಮರ್ ನುಕ್‌ಮ್ ಹಾಗೂ ಬಿಹಾರದ ವಿಶಾಖಾ ಸಿನ್ಹಾ ಜತೆ ಮಾತನಾಡಿದರು.
ಅರುಣಾಚಲಪ್ರದೇಶದ ಗ್ಯಾಮರ್ ನುಕುಮ್ ಅವರು ಎನ್‌ಐಟಿಯಲ್ಲಿ ಓದುತ್ತಿದ್ದಾರೆ. ಮೆಕಾನಿಕಲ್ ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ. ತಂದೆ ಸಣ್ಣ ಪುಟ್ಟ ಬಿಸಿನೆಸ್, ಕೃಷಿ ಮಾಡುತ್ತಿದ್ದಾರೆ. ಯುವ ಸಂಗಮದ ಬಗ್ಗೆ ಇಂಟರ್ ನೆಟ್‌ನಲ್ಲಿ ತಿಳಿದ ಗ್ಯಾಮರ್ ಅವರು ಆಸಕ್ತಿ ಬೆಳೆಸಿದರು. ಯುವ ಸಂಗಮ ಅಡಿಯಲ್ಲಿ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಅನುಭವ ಚೆನ್ನಾಗಿತ್ತು ಎಂದರು. ರಾಜಸ್ಥಾನದ ದೊಡ್ಡ ಸರೋವರಗಳನ್ನೂ ನೋಡಿದ್ದರಂತೆ. ಎರಡೂ ರಾಜ್ಯಗಳಲ್ಲಿ ದೇಶದ ಬಗ್ಗೆ ಪ್ರೀತಿ, ಅಭಿಮಾನ, ಗರ್ವವನ್ನು ನಾನು ಕಂಡೆ ಎಂದು ಪ್ರಧಾನಿ ಮೋದಿಯವರಿಗೆ ಗ್ಯಾಮರ್ ವಿವರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಬ್ಲಾಗ್‌ಗಳಲ್ಲಿ ಬರೆಯುವಂತೆ ಪ್ರಧಾನಿ ಸಲಹೆ ನೀಡಿದರು.
ಬಿಹಾರದ ವಿಶಾಖಾ ಸಿನ್ಹಾ ಅವರು ಯುವ ಸಂಗಮ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ತಮಿಳುನಾಡಿಗೆ ಭೇಟಿ ನೀಡಿದ್ದರು. ಯುವಜನತೆಗೆ ಇಂಥ ಉತ್ತಮ ಕಾರ್ಯಕ್ರಮ ನೀಡಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಸಲ್ಲಿಸಿದರು. ತಮಿಳುನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಭೇಟಿ ಖುಶಿಯಾಯಿತು. ಅಲ್ಲಿ ಅನೇಕ ಹೊಸ ಸ್ನೇಹಿತರ ಪರಿಚಯವಾಯಿತು. ಇಸ್ರೊ ಕಚೇರಿಗೆ ಭೇಟಿ ನೀಡುವ ಅವಕಾಶವೂ ಸಿಕ್ಕಿತ್ತು. ತಮಿಳುನಾಡಿನ ಇಡ್ಲಿ, ಉಪ್ಪಿಟ್ಟು, ದೋಸೆಯನ್ನು ಸವಿಯುವ ಅವಕಾಶ ಕೂಡ ಸಿಕ್ಕಿತು ಎಂದರು.
ಹಿರೋಷಿಮಾ ಮ್ಯೂಸಿಯಂ ಬಗ್ಗೆ ಮಾತನಾಡಿದ ಮೋದಿ: ಪ್ರಧಾನಿ ಮೋದಿ ಅವರು ಇತ್ತೀಚೆಗೆ ಜಪಾನಿನ ಹಿರೋಷಿಮಾಗೆ ಭೇಟಿ ನೀಡಿದ್ದರು. ಅಲ್ಲಿ ನಿರ್ಮಿಸಿರುವ ಯುದ್ಧ ಸ್ಮಾರಕ ಮತ್ತು ಮ್ಯೂಸಿಯಂ ಬಗ್ಗೆ ಪ್ರಸ್ತಾಪಿಸಿದರು. ದೇಶದಲ್ಲೂ ಭಿನ್ನ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ದೇಶದ ಸಂಸ್ಕೃತಿ, ಇತಿಹಾಸ, ರಾಷ್ಟ್ರೀಯತೆಯನ್ನು ಅರಿತುಕೊಳ್ಳಲು ಎಲ್ಲರೂ ಮ್ಯೂಸಿಯಂಗಳಿಗೆ ಭೇಟಿ ನೀಡಬೇಕು. ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದರು.
50,000 ಅಮೃತ ಸರೋವರಗಳ ನಿರ್ಮಾಣ: ದೇಶದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ 75 ಸರೋವರಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ನಿಮಗೆ ಅಚ್ಚರಿಯಾಗಬಹುದು, ಇದುವರೆಗೆ 50,000ಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಇದು ಜಲ ಸಂರಕ್ಷಣೆ ದೃಷ್ಟಿಯಿಂದ ದೊಡ್ಡ ನಡೆಯಾಗಿದೆ ಎಂದರು. ಫ್ಲೋಕ್ಸ್ ಜೆನ್, ಲಿವ್ ಎನ್ ಸೈನ್ಸ್ ಎಂಬ ಜಲ ಸಂರಕ್ಷಣೆ ಕುರಿತ ಸ್ಟಾರ್ಟಪ್‌ಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.
ಇದನ್ನೂ ಓದಿ: Mann Ki Baat: ಮೋದಿಯವರ ಮನ್ ಕೀ ಬಾತ್ ಒಂದು ಎಪಿಸೋಡ್ಗೆ 8.3 ಕೋಟಿ ರೂ.ವೆಚ್ಚ?; ವೈರಲ್ ಸಂದೇಶ ನಿಜವೇ?