ನವ ದೆಹಲಿ: ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ನೀವು ಕೇಳಿದ್ದೀರಿ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಾಮಾನ್ಯ ಮಾಜಿ ಸೈನಿಕರೊಬ್ಬರು, ನಡೆಸಿದ ಸಾಮಾಜಿಕ, ಸಹಕಾರಿ-ಕೃಷಿ ಕ್ರಾಂತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು. ಅವರ ಯಶೋಗಾಥೆ ದೇಶವಾಸಿಗಳಿಗೆ ಪ್ರೇರಣೆ ನೀಡಲಿದೆ ಎಂದು ಮನ್ ಕೀ ಬಾತ್‌ನ 101ನೇ ಸಂಚಿಕೆಯಲ್ಲಿ ಭಾನುವಾರ ಪ್ರಶಂಸಿಸಿದರು. ಪ್ರಧಾನಿ ಹೇಳಿದ್ದೇನು ಎಂಬುದನ್ನು ನೋಡೋಣ.
ಮಹಾರಾಷ್ಟ್ರದ ನಾಸಿಕ್ ಮೂಲದ ಸಜ್ಜನ, ಬುದ್ಧಿವಂತ ಮಹಾನುಭಾವ ಶಿವಾಜಿ ಶ್ಯಾಮರಾವ್ ಡೋಲೆಜೀ ಅವರ ಯಶೋಗಾಥೆ ಅದ್ಬುತ. ಅವರ ಸಾಹಸಗಾಥೆ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂಬ ಮಾತನ್ನು ಬಿಂಬಿಸುತ್ತದೆ. ಶಿವಾಜಿ ಡೋಲೆ ಅವರು ನಾಸಿಕ್ ಜಿಲ್ಲೆಯ ಸಣ್ಣ ಗ್ರಾಮದ ನಿವಾಸಿ. ಆದಿವಾಸಿ ರೈತ ಕುಟುಂಬದವರು. ಈ ಮೊದಲು ಸೈನಿಕರಾಗಿದ್ದವರು. ಸೇನೆಯಿಂದ ನಿವೃತ್ತರಾದ ಬಳಿಕ ಊರಿಗೆ ಹಿಂತಿರುಗಿದರು. ಹೊಸ ಜೀವನ ಆರಂಭಿಸಿದರು. ಕೃಷಿಯಲ್ಲಿ ಡಿಪ್ಲೊಮಾ ಮಾಡಿದರು. ರೈತರಾದರು.
ಪ್ರತಿಕ್ಷಣ ಕೃಷಿಯಲ್ಲಿ ಹೇಗೆ ಪರಿವರ್ತನೆ ಮಾಡಬಹುದು ಎಂದು ಆಲೋಚಿಸಿದರು. ಮಾತ್ರವಲ್ಲದೆ ಸ್ನೇಹಿತರು, ಸಮಾನ ಮನಸ್ಕರ ಜತೆಗೂಡಿ ಸಹಕಾರ ಸಂಸ್ಥೆ ಶುರು ಮಾಡಿದರು. ಇಪ್ಪತ್ತು ಜನರಿದದ ಟೀಮ್‌ನಲ್ಲಿ ಮಾಜಿ ಸೈನಿಕರು ಇದ್ದರು. ವೆಂಕಟೇಶ್ವರ ಕೋಪರೇಟಿವ್ ಪವರ್ & ಅಗ್ರೊ ಪ್ರೊಸೆಸಿಂಗ್ ಎಂಬ ಸಹಕಾರ ಸಂಸ್ಥೆಯ ನಿರ್ವಹಣೆಯನ್ನು ಕೈಗೆತ್ತಿಕೊಂಡರು. ಆಗ ಆ ಸಂಸ್ಥೆ ನಿಷ್ಕ್ರಿಯವಾಗಿತ್ತು. ಶಿವಾಜಿ ಬಳಗ ಇದರ ಕಾಯಕಲ್ಪ ಮಾಡಿದ ಬಳಿಕ ಸಂಸ್ಥೆ ಅಗಾಧವಾಗಿ ವಿಸ್ತರಿಸಿತು. ಇವತ್ತು ಮಹಾರಾಷ್ಟ್ರ, ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಇದೊಂದು ಅದ್ಭುತ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್‌ನಲ್ಲಿ ವಿವರಿಸಿದರು.
ಶಿವಾಜಿ ಶ್ಯಾಮರಾವ್ ಡೋಲೆಜೀ ಅವರ ನೇತೃತ್ವದಲ್ಲಿ ವೆಂಕಟೇಶ್ವರ ಕೋಪರೇಟಿವ್ ಪವರ್ & ಅಗ್ರೊ ಪ್ರೊಸೆಸಿಂಗ್ ಎಂಬ ಸಹಕಾರ ಸಂಸ್ಥೆ ಈಗ 20,000ಕ್ಕೂ ಹೆಚ್ಚು ರೈತರ ಸದಸ್ಯತ್ವವನ್ನು ಹೊಂದಿದೆ. ಸಾವಯವ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುತ್ತದೆ. ಡೇರಿ ಘಟಕವನ್ನೂ ಒಳಗೊಂಡಿದೆ. ಆಧುನಿಕ ಕೃಷಿ ಪದ್ಧತಿಯನ್ನು, ತಂತ್ರಜ್ಞಾನವನ್ನು ಕೈಗೊಂಡಿದೆ. ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಇದರಿಂದ ಸಾವಿರಾರು ರೈತರ ಆದಾಯ ವೃದ್ಧಿಸಿದೆ ಎಂದು ವಿವರಿಸಿದರು.
ಇದನ್ನೂ ಓದಿ: Mann Ki Baat : 101ನೇ ಮನ್ ಕಿ ಬಾತ್‌ನಲ್ಲಿ ವೀರ ಸಾವರ್ಕರ್ ವಿಚಾರಗಳ ಬಗ್ಗೆ ಮೋದಿ ಹೇಳಿದ್ದೇನು?