Site icon Vistara News

Mann Ki Baat@100 : ಪ್ರಧಾನಿಯವರ ಮನ್‌ ಕೀ ಬಾತ್‌ ಚಾರಿತ್ರಿಕ ಎಂದು ಪ್ರಶಂಸಿಸಿದ ಬಾಲಿವುಡ್‌ ನಟ ಆಮಿರ್‌ ಖಾನ್

Mann Ki Baat@100 Mann Ki Baat is historic has made a huge impact on people Aamir Khan praises

ನವ ದೆಹಲಿ: ಪ್ರಧಾನಿಯವರ ಮನ್‌ ಕಿ ಬಾತ್‌ ಬಾನುಲಿ ಕಾರ್ಯಕ್ರಮ (Mann Ki Baat@100) ಚಾರಿತ್ರಿಕವಾಗಿದ್ದು, ಭಾರತೀಯರ ಮೇಲೆ ಭಾರಿ ಪ್ರಭಾವ ಬೀರಿದೆ. ಪ್ರಧಾನಿಯವರಿಗೆ ಜನರ ಜತೆ ಸಂವಹನ ನಡೆಸಲು ಮಹತ್ವದ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಎಂದು ಬಾಲಿವುಡ್‌ ನಟ ಆಮಿರ್ ಖಾನ್‌ ಬುಧವಾರ ಪ್ರಶಂಸಿಸಿದ್ದಾರೆ.

ನವ ದೆಹಲಿಯಲ್ಲಿ ಬುಧವಾರ ನಡೆದ ಮನ್​ ಕೀ ಬಾತ್​@100 ರಾಷ್ಟ್ರೀಯ ಸಮಾವೇಶ (National Conclave on Mann Ki Baat@ 100) ಕಾರ್ಯಕ್ರಮದ ನೇಪಥ್ಯದಲ್ಲಿ ಮಾತನಾಡಿದ ಅವರು, (Aamir Khan) ದೇಶದ ಪ್ರಧಾನಿ ಜನರೊಂದಿಗೆ ಮಹತ್ವದ ವಿಷಯಗಳನ್ನು ಚರ್ಚಿಸಲು, ತಮ್ಮ ಚಿಂತನೆಗಳನ್ನು ಮುಂದಿಡಲು, ಸಲಹೆಗಳನ್ನು ನೀಡಲು ಮನ್‌ ಕಿ ಬಾತ್‌ ಬಾನುಲಿ ಕಾರ್ಯಕ್ರಮವನ್ನು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿ ಬಳಸಿರುವುದು ಮಹತ್ವಪೂರ್ಣವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೇ ಭಾನುವಾರ ನಡೆಸಿಕೊಡುವ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕೀ ಬಾತ್ ​ ಶತಕ ಪೂರೈಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಏಪ್ರಿಲ್​ 30ರಂದು ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಮನ್​ ಕೀ ಬಾತ್​​ನ 100ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೀಗ ಮನ್​ ಕೀ ಬಾತ್​ ಶತಕದ ಆವೃತ್ತಿ ತಲುಪುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಸಂಭ್ರಮಿಸುವ ಸಲುವಾಗಿ ಬಿಜೆಪಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ.

ಅದರಲ್ಲಿ ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಡೆಸಿದ ಮನ್​ ಕೀ ಬಾತ್​ ರಾಷ್ಟ್ರೀಯ ಸಮಾವೇಶವೂ ಒಂದಾಗಿತ್ತು. ( National Conclave on Mann Ki Baat@ 100 ) ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮನ್​ ಕೀ ಬಾತ್​@100 ರಾಷ್ಟ್ರೀಯ ಸಮಾವೇಶವನ್ನು ಉಪರಾಷ್ಟ್ರಪತಿ ಜಗದೀಪ್ ಧನ್​ಕರ್​ ಅವರು ಉದ್ಘಾಟಿಸಿದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡರು. ಗೃಹ ಸಚಿವ ಅಮಿತ್‌ ಶಾ ಮಾತನಾಡಿ, ಪ್ರಧಾನಿ ಮೋದಿಯವರು ಪ್ರತಿಯೊಂದು ಸವಾಲನ್ನೂ ಅವಕಾಶಗಳಾಗಿ ಪರಿವರ್ತಿಸಿದ್ದಾರೆ ಎಂದರು.

ಇಷ್ಟು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​​ ಕಾರ್ಯಕ್ರಮದಲ್ಲಿ ಒಟ್ಟು 700 ಗಣ್ಯರ/ಸಾಧಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರಲ್ಲಿ 100ಮಂದಿ ಗಣ್ಯರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು. ಅದರ ಅನ್ವಯ ಕಲೆ, ಸಂಸ್ಕೃತಿ, ವ್ಯಾಪಾರ, ಕ್ರೀಡೆ, ಸಾಮಾಜಿಕ ಕೆಲಸ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ಈ ಸಮಾವೇಶದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್​, ಕ್ರೀಡಾ ಪಟುಗಳಾದ ದೀಪಿಕಾ ಮಲಿಕ್​ (ಅಥ್ಲೀಟ್​), ನಿಖಾತ್ ಜರೀನ್​ (ಬಾಕ್ಸರ್​), ವಿವಿಧ ಪ್ರಮುಖ ಪತ್ರಕರ್ತರು, ರೇಡಿಯೋ ಜಾಕಿಗಳು, ಉದ್ಯಮಿಗಳು ಪಾಲ್ಗೊಂಡು, ಸಂವಾದದಲ್ಲಿ ಭಾಗವಹಿಸಿದರು.

Exit mobile version