ಚೆನ್ನೈ: ಬಹುಭಾಷಾ ನಟಿ ತ್ರಿಶಾ (Trisha) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಕ್ಕಾಗಿ ಮತ್ತು 1 ಕೋಟಿ ರೂ.ಗಳ ಪರಿಹಾರ ಕೋರಿದ್ದಕ್ಕಾಗಿ ತಮಿಳು ಚಿತ್ರ ನಟ ಮನ್ಸೂರ್ ಅಲಿ ಖಾನ್ (Mansoor Ali Khan) ವಿರುದ್ಧ ಮದ್ರಾಸ್ ಹೈಕೋರ್ಟ್ ಮಂಗಳವಾರ ಕಿಡಿ ಕಾರಿದೆ. ಪ್ರಕರಣ ದಾಖಲಿಸಿದ ಮನ್ಸೂರ್ ಅಲಿ ಖಾನ್ ಅವರ ಕ್ರಮವನ್ನು ಪ್ರಶ್ನಿಸಿದ ನ್ಯಾಯಾಲಯವು, ಅವಹೇಳನಕಾರಿ ಹೇಳಿಕೆ ನೀಡಿದ್ದ ನಿಮ್ಮ ವಿರುದ್ಧವೇ ತ್ರಿಶಾ ಮೊಕದ್ದಮೆ ಹೂಡಬೇಕಾಗಿತ್ತು ಎಂದು ಹೇಳಿದೆ.
ಕೋರ್ಟ್ ಹೇಳಿದ್ದೇನು?
“ಬಂಧನದಿಂದ ತಪ್ಪಿಸಿಕೊಳ್ಳಲು ಮನ್ಸೂರ್ ಅಲಿ ಖಾನ್ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆಯೇ? ವಾಸ್ತವವಾಗಿ ತ್ರಿಶಾ ಮೊಕದ್ದಮೆಯನ್ನು ಹೂಡಬೇಕಾಗಿತ್ತು. ಯಾವ ಆಧಾರದ ಮೇಲೆ ಮನ್ಸೂರ್ ಅಲಿ ಖಾನ್ ಮೊಕದ್ದಮೆ ಹೂಡಿದ್ದಾರೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬುದರ ಕುರಿತು ನಟನಿಗೆ ಸಲಹೆ ನೀಡುವಂತೆ ಖಾನ್ ಅವರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.
ವಿಚಾರಣೆ ವೇಳೆ ಮನ್ಸೂರ್ ಅಲಿ ಖಾನ್ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ತ್ರಿಶಾ ಅಥವಾ ಯಾವುದೇ ಮಹಿಳೆಯರ ವಿರುದ್ಧ ವೈಯಕ್ತಿಕ ಹೇಳಿಕೆ ನೀಡಿಲ್ಲ ಎಂದು ವಾದಿಸಿದ್ದಾರೆ. ನ್ಯಾಯಾಲಯವು ತ್ರಿಶಾ, ಚಿರಂಜೀವಿ ಮತ್ತು ಖುಷ್ಬೂ ಅವರಿಂದ ಹೇಳಿಕೆಗಳನ್ನು ಪಡೆಯಲು ತಿಳಿಸಿದೆ. ಕೊನೆಗೆ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಲಾಯಿತು.
ಏನಿದು ವಿವಾದ?
ಕೆಲವು ದಿನಗಳ ಹಿಂದೆ ಮನ್ಸೂರ್ ಅಲಿ ಖಾನ್ ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ನಾನು ʼಲಿಯೋʼ ಸಿನಿಮಾದಲ್ಲಿ ತ್ರಿಶಾ ಜತೆ ನಟಿಸುತ್ತೇನೆ ಎಂದಾಗ ಖುಷಿಯಾಯಿತು. ಬೇರೆ ನಟಿಯರ ಜತೆ ಇದ್ದಂತೆ ತ್ರಿಶಾ ಅವರ ಜತೆಗೂ ಒಂದು ಬೆಡ್‌ರೂಮ್ ಸೀನ್ ಇರುತ್ತದೆ ಎಂದು ಭಾವಿಸಿದ್ದೆ. ನಾನು ತುಂಬ ರೇಪ್ ದೃಶ್ಯಗಳಲ್ಲಿ ನಟಿಸಿರುವ ಕಾರಣ ಇದೆಲ್ಲ ನನಗೆ ಏನೂ ಅನಿಸುವುದಿಲ್ಲ. ಆದರೆ ಸಿನಿಮಾ ತಂಡದವರು ಕಾಶ್ಮೀರದಲ್ಲಿ ಶೂಟಿಂಗ್ ಮಾಡುವ ವೇಳೆ ನನಗೆ ತ್ರಿಶಾ ಅವರನ್ನು ತೋರಿಸಲೇ ಇಲ್ಲ” ಎಂದು ಹೇಳಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು.
ಮನ್ಸೂರ್ ಅಲಿ ಖಾನ್ ವಿರುದ್ಧ ತ್ರಿಶಾ ಆಕ್ರೋಶ ವ್ಯಕ್ತಪಡಿಸಿದ್ದರು. “ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ ವಿಡಿಯೊ ನೋಡಿದೆ. ಇಂತಹ ಕೀಳು ಅಭಿರುಚಿಯ, ಸ್ತ್ರೀದ್ವೇಷದಿಂದ ಕೂಡಿರುವ, ತುಚ್ಛ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಾನು ಇಂತಹ ವ್ಯಕ್ತಿಯ ಜತೆ ಇದುವರೆಗೆ ತೆರೆ ಹಂಚಿಕೊಂಡಿಲ್ಲ ಎಂಬುದೇ ಸಮಾಧಾನದ ಸಂಗತಿ. ಅಷ್ಟೇ ಅಲ್ಲ, ನಾನು ಸಿನಿಮಾ ಕ್ಷೇತ್ರದಲ್ಲಿ ಇರುವವರೆಗೆ ಈ ವ್ಯಕ್ತಿಯ ಜತೆ ನಟಿಸುವುದಿಲ್ಲ. ಇಂತಹ ವ್ಯಕ್ತಿಗಳು ಮನುಕುಲಕ್ಕೇ ಕೆಟ್ಟ ಹೆಸರು ತರುತ್ತಾರೆ” ಎಂದು ಪೋಸ್ಟ್ ಮಾಡಿದ್ದರು.
Mansoor Ali Khan: ತ್ರಿಶಾ ವಿರುದ್ಧ ಮಾನನಷ್ಟ ಕೇಸ್; ಕ್ಷಮೆ ಕೇಳಿದ್ದು ದೊಡ್ಡ ಜೋಕ್ ಎಂದ ಮನ್ಸೂರ್!
ವಿವಾದದ ಬಳಿಕ ಮನ್ಸೂರ್ ಅಲಿ ಖಾನ್ ಸ್ಪಷ್ಟನೆ ನೀಡಿ, “ನಾನು ನಟಿಯರನ್ನು ಗೌರವಿಸುತ್ತೇನೆ. ನನ್ನ ಮಗಳು ತ್ರಿಶಾ ಅವರ ದೊಡ್ಡ ಅಭಿಮಾನಿ. ನಾನು ಉದ್ದೇಶಪೂರ್ವಕವಾಗಿ ನೋವುಂಟು ಮಾಡಬೇಕು ಎಂದು ಹಾಗೆ ಹೇಳಿಲ್ಲ. ತಮಾಷೆಯಾಗಿ ಮಾತನಾಡುವಾಗ ಹಾಗೆ ಹೇಳಿದೆ” ಎಂದಿದ್ದರು. ಬಳಿಕ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ