Site icon Vistara News

Kharge Congress President | ಮಲ್ಲಿಕಾರ್ಜುನ ಖರ್ಗೆಗೆ ಶುಭಾಶಯಗಳ ಸುರಿಮಳೆ! ಯಾರು, ಏನು ಹೇಳಿದರು?

Mallikarjun Kharge

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಿ, ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Kharge Congress President) ಅವರು ಗೆಲುವು ಸಾಧಿಸುತ್ತಿದ್ದಂತೆ ಹಲವು ನಾಯಕರು ಶುಭಾಶಯಗಳ ಸುರಿಮಳೆಗೈದಿದ್ದಾರೆ. ಖರ್ಗೆ ಗೆಲುವಿಗೆ ಟ್ವೀಟ್ ಮಾಡಿ ಶುಭಾಶಯ ಕೋರಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡ ಅವರು, ದಶಕಗಳ ನನ್ನ ಗೆಳೆಯ ಹಾಗೂ ಸಹೋದ್ಯೋಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೆಲುವಿನ ಶುಭಾಶಯಗಳು. ಕಾಂಗ್ರೆಸ್ ಮತ್ತು ಕರ್ನಾಟಕಕ್ಕೆ ಇದೊಂದು ಐತಿಹಾಸಿಕ ಗಳಿಗೆಯಾಗಿದೆ. ಅವರ ನೇತೃತ್ವದಲ್ಲಿ ಪಕ್ಷವು ಯಶಸ್ಸು ಗಳಿಸಲಿ ಎಂದು ಹಾರೈಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗುವುದು ಅತಿದೊಡ್ಡ ಗೌರವ ಹಾಗೂ ಜವಾಬ್ದಾರಿಯಾಗಿದೆ. ಖರ್ಗೆ ಅವರಿಗೆ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ. ಕಾಂಗ್ರಸ್ ನಿಜವಾದ ಪುನರುತ್ಥಾನ ಇನ್ನು ಆರಂಭವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಖರ್ಗೆ ಎದುರು ಸೋತ ಶಶಿ ತರೂರ್ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖರ್ಗೆ ಅವರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ. ಪ್ರತಿಭೆ ಮತ್ತು ಅನುಭವವನ್ನು ಮೈಗೂಡಿಸಿಕೊಂಡಿರುವ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಶಕ್ತಿ ಇದೆ. ಖರ್ಗೆ ಅವರ ಆಯ್ಕೆ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವದ ಗೆಲುವಾಗಿದೆ. ಖರ್ಗೆ ಅವರು ಸುದೀರ್ಘ ರಾಜಕೀಯ ಅನುಭವವನ್ನು ಹೊಂದಿರುವ ವ್ಯಕ್ತಿಯಾಗಿದ್ದು, ಅದರಿಂದ ಪಕ್ಷ ಹಾಗೂ ನಮ್ಮ ಕಾರ್ಯಕರ್ತರಿಗೆ ಬಲ ಬರಲಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಹರೀಶ್ ರಾವತ್ ಅವರೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಾಶಯ ಕೋರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಭಾರೀ ಬಹುಮತದಿಂದ ಗೆದ್ದಿದ್ದಾರೆ. ಇದು ಪ್ರಜಾಪ್ರಭುತ್ವದ ಗೆಲುವು. ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಅನುಭವವದ ಮೇಲೆ ನಂಬಿದ್ದು, ಇದರಿಂದ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ಕಾಂಗ್ರೆಸ್‌ನ ಯುವ ನಾಯಕ ಸಚಿನ್ ಪೈಲಟ್ ಅವರು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಾಶಯ. ಅವರಿಗಿರುವ ರಾಜಕೀಯ ಅನುಭವವು ಪಕ್ಷವು ಯಶಸ್ಸಿನ ಹಾದಿಯಲ್ಲಿ ಸಾಗಲು ನೆರವು ನೀಡಲಿದೆ ಎಂದು ಡಾ. ಅಜಯ್ ಧರ್ಮ್ ಸಿಂಗ್ ಅವರು ಹೇಳದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಕೆ.ಜಿ.ಜಾರ್ಜ್ ಅವರೂ ಖರ್ಗೆ ಅವರಿಗೆ ಶುಭಾಶಯ ಕೋರಿದ್ದಾರೆ. ವಿವಿಧ ರಾಜ್ಯ ಘಟಕಗಳು, ಯುವ ಘಟಕಗಳು ತಮ್ಮ ಶುಭಾಶಯಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿವೆ.

ಬಿಜೆಪಿಯ ಬೆಂಬಲಿಗರು, ಬಿಜೆಪಿ ಬಗ್ಗೆ ಸಹಾನುಭೂತಿ ಹೊಂದಿದವರು ಮತ್ತು ಬಿಜೆಪಿಯ ಕಾರ್ಯಕರ್ತರು ಸೋಷಿಯಲ್ ಮೀಡಿಯಾಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲುವನ್ನು ಕುಹಕವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ | Kharge Congress President | ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವು

Exit mobile version