Site icon Vistara News

Maoists Attack: ಛತ್ತೀಸ್‌ಗಢದಲ್ಲಿ ಮತ್ತೆ ಮಾವೋವಾದಿಗಳ ಅಟ್ಟಹಾಸ; ಇಬ್ಬರು ಪೊಲೀಸರು ಹುತಾತ್ಮ

Maoists Attack

Maoists Attack

ರಾಯ್‌ಪುರ: ಛತ್ತೀಸ್‌ಗಢ (Chhattisgarh)ದಲ್ಲಿ ಮತ್ತೆ ಮಾವೋವಾದಿಗಳ ಅಟ್ಟಹಾಸ (Maoists Attack) ಮುಂದುವರಿದಿದೆ. ಬಿಜಾಪುರದ ತಾರೆಮ್‌ನಲ್ಲಿ ಶಂಕಿತ ಮಾವೋವಾದಿಗಳು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸಿದ್ದು, ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ರಾಜ್ಯ ಕಾರ್ಯಪಡೆಯ ಮುಖ್ಯ ಕಾನ್ಸ್‌ಟೇಬಲ್‌ ಭರತ್ ಲಾಲ್ ಸಾಹು ಮತ್ತು ಕಾನ್ಸ್‌ಟೇಬಲ್‌ ಸತೇರ್ ಸಿಂಗ್ ಮೃತರು.

ತಾರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಿಮಾರ್ಕಾ ಅರಣ್ಯದಲ್ಲಿ ಬುಧವಾರ ರಾತ್ರಿ ಐಇಡಿ ಸ್ಫೋಟ ಸಂಭವಿಸಿದೆ. ಭದ್ರತಾ ಪಡೆ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ನಡುವಿನ ಪ್ರದೇಶದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಂಡ ಶೋಧ ಕಾರ್ಯ ನಡೆಸಿತ್ತು. ಹಿಂದಿರುಗುವ ವೇಳೆ ಐಇಡಿ ಸ್ಫೋಟಗೊಂಡು ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ತರಬೇತಿ ಪಡೆದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯ ವಿಶೇಷ ಕಾರ್ಯಾಚರಣೆ ಘಟಕವಾದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್‌ (CoBRA) ಜತೆಗೂಡಿ ಜಂಟಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. “ಹೆಚ್ಚುವರಿ ಭದ್ರತಾ ಪಡೆಗಳನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿದೆ ಮತ್ತು ಗಾಯಗೊಂಡ ಎಸ್‌ಟಿಎಫ್‌ (ವಿಶೇಷ ಕಾರ್ಯಪಡೆ) ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಗಡಿಯಲ್ಲಿರುವ ಜರಬಂಡಿ ಬಳಿ ಮಹಾರಾಷ್ಟ್ರ ಪೊಲೀಸರು 12 ಮಾವೋವಾದಿಗಳನ್ನು ಕೊಂದ ದಿನವೇ ಈ ಘಟನೆ ನಡೆದಿದೆ. ಛತ್ತೀಸ್‌ಗಡ ಗಡಿ ಪ್ರದೇಶದಲ್ಲಿರುವ ವಾಂದೊಳಿ ಗ್ರಾಮದಲ್ಲಿರುವ ಅರಣ್ಯ ಪ್ರದೇಶದಲ್ಲಿ 15 ನಕ್ಸಲರು ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಡೆಪ್ಯುಟಿ ಎಸ್‌ಪಿ ನೇತೃತ್ವದಲ್ಲಿ ಏಳು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಮಧ್ಯಾಹ್ನ ಶುರುವಾದ ಗುಂಡಿನ ಚಕಮಕಿ ಸಾಯಂಕಾಲದವರೆಗೂ ಮುಂದುವರಿದಿತ್ತು. ದಾಳಿಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಪೊಲೀಸ್‌ ಒಬ್ಬ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ನಾಗ್ಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಬರೋಬ್ಬರು ಆರು ಗಂಟೆಗಳ ಕಾರ್ಯಾಚರಣೆ ಬಳಿಕ 12 ಮಾವೋವಾದಿಗಳನ್ನು ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಇಲ್ಲಿಯವರೆಗೆ 3 AK47, 2 INSAS, 1 ಕಾರ್ಬೈನ್ ಮತ್ತು ಒಂದು SLR ಸೇರಿದಂತೆ ಏಳು ಅಟೋಮ್ಯಾಟಿವ್‌ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲವು ವಾರಗಳ ಹಿಂದೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನ ಸ್ಫೋಟಿಸಿದ ಕಾರಣ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಸುಕ್ಮಾ ಜಿಲ್ಲೆಯ (Sukma District) ಸಿಲ್ಗರ್‌ ಹಾಗೂ ತೆಕುಲಗುಡೆಮ್‌ ಪ್ರದೇಶದ ಮಧ್ಯೆ ಮಾವೋವಾದಿಗಳು ಐಇಡಿ ಇರಿಸಿದ್ದರು. ಸಿಆರ್‌ಪಿಎಫ್‌ ವಾಹನವು ಪ್ರದೇಶದಲ್ಲಿ ಗಸ್ತು ತಿರುಗುವಾಗ ಅದನ್ನು ಸ್ಫೋಟಿಸಲಾಗಿದೆ. ಇದರಿಂದಾಗಿ ಇಬ್ಬರು ಯೋಧರು ಹುತಾತ್ಮರಾಗಿದ್ದರು.

ಇದನ್ನೂ ಓದಿ: Naxalites Killed: 6 ಗಂಟೆ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 12 ನಕ್ಸಲರ ಎನ್‌ಕೌಂಟರ್

6 ತಿಂಗಳಲ್ಲಿ 126 ನಕ್ಸಲರ ಹತ್ಯೆ

ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲರ ವಿರುದ್ಧ ಭಾರಿ ಸಮರ ಸಾರಿದ್ದಾರೆ. ಪ್ರಸಕ್ತ ವರ್ಷದ ಆರು ತಿಂಗಳಲ್ಲಿ 126 ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. 2023ರಲ್ಲಿ ಭದ್ರತಾ ಸಿಬ್ಬಂದಿಯು 22 ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದರು. ಲೋಕಸಭೆ ಚುನಾವಣೆಗೆ ವೇಳೆಯೇ ತೆಲಂಗಾಣ ಗಡಿ ಹಾಗೂ ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ ಸೇರಿ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿ ಇರುತ್ತದೆ. ಹಾಗಾಗಿ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು ಎಂದು ತಿಳಿದುಬಂದಿದೆ.

Exit mobile version