ಮುಂಬೈ: ಮಾವೋವಾದಿ ನಾಯಕ ಕೊಬಾರ್ಡ್ ಗಾಂಧಿ ಅವರ ಜೀವನ ಚರಿತ್ರೆ ಕೃತಿಯ ಮರಾಠಿ ಅನುವಾದಕ್ಕಾಗಿ ಲೇಖಕಿ ಅನಘಾ ಲೆಲೆ ಅವರಿಗೆ ನೀಡಿದ ರಾಜ್ಯ ಸಾಹಿತ್ಯ ಪ್ರಶಸ್ತಿಯನ್ನು ಮಹಾರಾಷ್ಟ್ರ ಸರ್ಕಾರವು ಹಿಂಪಡೆದ ಕಾರಣ ರಾಜ್ಯದಲ್ಲೀಗ ಪ್ರಶಸ್ತಿ ವಾಪಸ್ ಅಭಿಯಾನ (Award Wapsi In Maharashtra) ಶುರುವಾಗಿದೆ.
ಕೊಬಾಡ್ ಗಾಂಧಿ ಅವರ “ಫ್ರ್ಯಾಕ್ಚರ್ಡ್ ಫ್ರೀಡಂ: ಪ್ರಿಸನ್ ಮೆಮೊರ್ಸ್” (Fractured Freedom: Prison Memoirs) ಕೃತಿಯನ್ನು ಮರಾಠಿಗೆ ಅನುವಾದ ಮಾಡಿದ್ದಕ್ಕಾಗಿ ಅನಘಾ ಲೆಲೆ ಅವರಿಗೆ 2021ರಲ್ಲಿ ಮಹಾ ವಿಕಾಸ ಅಘಾಡಿ ಮೈತ್ರಿ ಸರ್ಕಾರವು ದಿವಂಗತ ಯಶವಂತರಾವ್ ಚವ್ಹಾಣ್ ರಾಜ್ಯ ಸಾಹಿತ್ಯ ಪ್ರಶಸ್ತಿ ನೀಡಲಾಗಿತ್ತು. ಆದರೆ, ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸರ್ಕಾರವು, ಪುಸ್ತಕವು ಮಾವೋವಾದವನ್ನು ಪ್ರತಿಪಾದಿಸುತ್ತಿದೆ ಎಂಬ ಕಾರಣಕ್ಕಾಗಿ ಲೇಖಕಿಗೆ ನೀಡಿದ ಪ್ರಶಸ್ತಿಯನ್ನು ಹಿಂಪಡೆದಿದೆ. ಇದಕ್ಕೆ ರಾಜ್ಯ ಸಾಹಿತ್ಯ ವಲಯದಲ್ಲಿ ಖಂಡನೆ ವ್ಯಕ್ತವಾಗಿದ್ದು, ಲೇಖಕರು ಪ್ರಶಸ್ತಿ ವಾಪಸ್ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಶಸ್ತಿ ವಾಪಸ್ ಅಭಿಯಾನ
ಖ್ಯಾತ ಮರಾಠಿ ಲೇಖಕ, ಜೆಎನ್‌ಯು ಪ್ರೊಫಸೆರ್ ಶರದ್ ಬಾವಿಸ್ಕಾರ್ ಸೇರಿ ಹಲವರು ಪ್ರಶಸ್ತಿ ವಾಪಸ್ ಘೋಷಣೆ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಶರದ್ ಬಾವಿಸ್ಕಾರ್ ಅಲ್ಲದೆ, ಆನಂದ್ ಕರಂಡಿಕರ್ ಅವರು ಕೂಡ ಪ್ರಶಸ್ತಿ ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ. ಮತ್ತೊಬ್ಬ ಲೇಖಕಿ ಪ್ರಜ್ಞಾ ಪವಾರ್ (Pradnya Pawar) ಅವರು ಮಹಾರಾಷ್ಟ್ರ ಸ್ಟೇಟ್ ಲಿಟರೇಚರ್ ಸೊಸೈಟಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ರಾಜ್ಯ ಸಾಹಿತ್ಯ ಮಂಡಳಿಯಿಂದ ನೀರ್ಜಾ ಅವರು ಹೊರಬಂದಿದ್ದಾರೆ. ಆಕ್ರೋಶ ಹೆಚ್ಚಾಗುತ್ತಿರುವ ಕಾರಣ ಇನ್ನೂ ಹಲವು ಲೇಖಕರು ಪ್ರಶಸ್ತಿ ಹಿಂತಿರುಗಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳ ಬಂಧನದ ಬೆನ್ನಲ್ಲೇ ಪಿ.ಸಾಯಿನಾಥ್‌ರಿಂದ ಬಸವಶ್ರೀ ಪ್ರಶಸ್ತಿ ವಾಪಸ್!