ನವದೆಹಲಿ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು(Central Government), ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಲೀಗ್‌ನ ಮಸರತ್ ಆಲಂ ಬಣವನ್ನು(Masarat Alam faction Msulim league) ಐದು ವರ್ಷಗಳ ಕಾಲ ನಿಷೇಧಿಸಿದೆ. ಕೇಂದ್ರ ಗೃಹ ಸಚಿವಾಲಯವು (Home Ministry) ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ’ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ)’/ಎಂಎಲ್‌ಜೆಕೆ-ಎಂಎ ಸಂಘಟನೆಯನ್ನು ಯುಎಪಿಎ ಅಡಿಯಲ್ಲಿ ‘ಕಾನೂನುಬಾಹಿರ ಸಂಘ’ ಎಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಘಟನೆ ಮತ್ತು ಅದರ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸುವ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಏಕತೆ, ಸಾರ್ವಭೌಮತ್ವ ಮತ್ತು ವಿರುದ್ಧವಾಗಿ ವರ್ತಿಸುವ ಯಾರೇ ಆಗಲಿ ಅಂಥವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಂದೇಶವು ಜೋರಾಗಿದೆ ಮತ್ತು ಸ್ಪಷ್ಟವಾಗಿದೆ. ಕಾನೂನಿನ ಸಂಪೂರ್ಣ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಈ ಸಂಘಟನೆಯ ಕುರಿತು ಬುಧವಾರ ಅಧಿಕೃತ ನೋಟಿಫಿಕೇಷನ್ ಹೊರಡಿಸಲಾಗಿದೆ. ಮಸರತ್ ಆಲಂ ಭಟ್ ಅಧ್ಯಕ್ಷತೆಯ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸರತ್ ಆಲಂ ಬಣ) ಭಾರತ-ವಿರೋಧಿ ಮತ್ತು ಪಾಕಿಸ್ತಾನದ ಪರ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದೆ. ಈ ಸಂಘಟನೆಯ ಉದ್ದೇಶಗಳು ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವುದು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಸ್ವಾತಂತ್ರ್ಯ ಪಡೆಯುವುದು ಆಗಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ವಶಿಷ್ಠ ಅವರು ತಿಳಿಸಿದ್ದಾರೆ.
ಈ ಸಂಘಟನೆಯ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಸ್ಲಿಮ್ ಲೀಗ್ ನಾಯಕರು ಮತ್ತು ಸದಸ್ಯರು ಪಾಕಿಸ್ತಾನ ಸೇರಿದಂತೆ ವಿವಿಧ ಮೂಲಗಳ ಮೂಲಕ ನಿಧಿ ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವುದು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಅದರ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ನಿರಂತರ ಕಲ್ಲು ತೂರಾಟ ನಡೆಸಿವೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮುಸ್ಲಿಮ್ ಲೀಗ್ ಅದರ ಸದಸ್ಯರು ದೇಶದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ, ಇದರಿಂದಾಗಿ ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಮತ್ತು ಅದು ರಾಜ್ಯದ ಸಾಂವಿಧಾನಿಕ ಅಧಿಕಾರ ಮತ್ತು ಸಾರ್ವಭೌಮತ್ವವನ್ನು ಕಡೆಗಣಿಸುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: PFI Banned | ಪಿಎಫ್‌ಐ ನಿಷೇಧ: ಕೇಂದ್ರ ಸರಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್