Site icon Vistara News

ದಾಳಿಗೆ ಸಂಚು; ಪುಲ್ವಾಮ ದಾಳಿ ರೂವಾರಿ ಮಸೂದ್‌ ಅಜರ್‌ ಆಪ್ತನ ವಿರುದ್ಧ ಚಾರ್ಜ್‌ಶೀಟ್‌

Masood Azhar

Masood Azhar’s associate among 2 men charged by NIA for recruiting terrorists

ನವದೆಹಲಿ: ದೇಶದಲ್ಲಿ ಉಗ್ರರ ದಾಳಿಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ, ಪುಲ್ವಾಮ ದಾಳಿ ರೂವಾರಿ ಮಸೂದ್‌ ಅಜರ್‌ (Masood Azhar) ಆಪ್ತ ಸೇರಿ ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಚಾರ್ಜ್‌ಶೀಟ್‌ ಸಲ್ಲಿಸಿದೆ. ಇಬ್ಬರಲ್ಲಿ ಒಬ್ಬ ಪಾಕಿಸ್ತಾನದವನಾಗಿದ್ದಾನೆ ಎಂದು ಎನ್‌ಐಎ ಮೂಲಗಳಿಂದ ತಿಳಿದುಬಂದಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ ಅಬ್ಬಾಸ್‌ಪುರದವನಾದ ಮೊಹಮ್ಮದ್‌ ದಿಲಾವರ್‌ ಇಕ್ಬಾಲ್‌ ಹಾಗೂ ಕುಪ್ವಾರ ಜಿಲ್ಲೆಯ ಮೊಹಮ್ಮದ್‌ ಉಬೇದ್‌ ಮಲಿಕ್‌ ಎಂಬುವರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇವರಲ್ಲಿ ಮಸೂದ್‌ ಅಜರ್‌ಗೆ ಮೊಹಮ್ಮದ್‌ ದಿಲಾವರ್‌ ಇಕ್ಬಾಲ್‌ ಆಪ್ತನಾಗಿದ್ದಾನೆ. ಇವರ ವಿರುದ್ಧ ಐಪಿಸಿ ಸೆಕ್ಷನ್‌ 120 ಬಿ (ಅಪರಾಧಕ್ಕೆ ಪಿತೂರಿ), 121 ಎ (ಅಪರಾಧ ಚಟುವಟಿಕೆಗಳಿಗೆ ಸಂಚು) ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

“ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಂಡು, ಶಾಂತಿ ಕದಡುವುದು ಮೊಹಮ್ಮದ್‌ ದಿಲಾವರ್‌ ಇಕ್ಬಾಲ್‌ ಉದ್ದೇಶವಾಗಿದೆ. ಈತನು ಕಾಶ್ಮೀರದಲ್ಲಿ ಹಲವು ಯುವಕರನ್ನು ಉಗ್ರ ಸಂಘಟನೆಗಳಿಗೆ ಸೇರಿಸಲು ಪ್ರಯತ್ನಿಸುತ್ತಿದ್ದ. ಯುವಕರನ್ನು ನೇಮಿಸಿ, ಅವರಿಗೆ ಮಸೂದ್‌ ಅಜರ್‌ನ ಪ್ರಚೋದನಾತ್ಮಕ ಆಡಿಯೊ ಹಾಗೂ ವಿಡಿಯೊಗಳನ್ನು ಕಳುಹಿಸಿ, ಅವರ ತಲೆಯಲ್ಲಿ ಮೂಲಭೂತವಾದವನ್ನು ಬಿತ್ತುತ್ತಿದ್ದ. ಮೊಹಮ್ಮದ್‌ ಉಬೇದ್‌ ಮಲಿಕ್‌ ಈತನಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದ” ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Lashkar Commander: ಪಾಕ್‌ನಲ್ಲಿ ಲಷ್ಕರೆ ಕಮಾಂಡರ್‌ನ ಹತ್ಯೆ; ಈತ ಕಾಶ್ಮೀರ ದಾಳಿ ರೂವಾರಿ!

ಜಮ್ಮು-ಕಾಶ್ಮೀರ ಮಾತ್ರವಲ್ಲದೆ ದೇಶದ ಹಲವೆಡೆ ದಾಳಿಗಳನ್ನು ನಡೆಸುವುದು, ಆ ಮೂಲಕ ಭಾರತದ ಸಾಮರಸ್ಯ, ಶಾಂತಿಯನ್ನು ಹಾಳು ಮಾಡುವುದು ಇವರ ಉದ್ದೇಶವಾಗಿತ್ತು. ಅಷ್ಟೇ ಅಲ್ಲ, ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯಗಳ ಕಾರ್ಮಿಕರು, ನೌಕರರನ್ನು ಗುರುತಿಸಿ, ಅವರನ್ನು ಹತ್ಯೆಗೈಯುವುದು ಕೂಡ ಇವರ ಸಂಚಾಗಿತ್ತು ಎಂದು ತಿಳಿದುಬಂದಿದೆ. ಇವರ ವಿರುದ್ಧ ಎನ್‌ಐಎ 2022ರ ಜೂನ್‌ನಲ್ಲಿಯೇ ಪ್ರಕರಣ ದಾಖಲಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version