Site icon Vistara News

Dal Lake: ದಾಲ್‌ ಸರೋವರದಲ್ಲಿ ದೋಣಿಗೆ ಬೆಂಕಿ; ಮೂವರು ವಿದೇಶಿ ಪ್ರವಾಸಿಗರ ಸಾವು

Dal Lake Fire Accident

Massive Fire Engulfs Houseboats At Dal Lake In Kashmir, 3 Tourists Killed

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ದಾಲ್‌ ಸರೋವರವನ್ನು (Dal Lake) ಭೂ ಲೋಕದ ಸರೋವರ ಎಂದೇ ಹೇಳಲಾಗುತ್ತದೆ. ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ನಿತ್ಯ ದಾಲ್‌ ಸರೋವರದಲ್ಲಿ ಸಂಚರಿಸಿ ಅದ್ಭುತ ಅನುಭವ ಪಡೆಯುತ್ತಾರೆ. ಆದರೆ, ಇದೇ ದಾಲ್‌ ಸರೋವರದಲ್ಲಿ ದೋಣಿಯೊಂದು ಬೆಂಕಿಗೆ (Fire Accident) ತುತ್ತಾಗಿದ್ದು, ಮೂವರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ.

“ಶನಿವಾರ (ನವೆಂಬರ್‌ 11) ಬೆಳಗಿನ ಜಾವ ದಾಲ್‌ ಸರೋವರದ 9ನೇ ಘಾಟ್‌ ಬಳಿ ಹೌಸ್‌ಬೋಟ್‌ ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಸಫೀನಾ ಎಂಬ ಹೌಸ್‌ಬೋಟ್‌ನಲ್ಲಿ ಹಲವು ಪ್ರವಾಸಿಗರು ತಂಗಿದ್ದರು. ಇದೇ ವೇಳೆ ಅಗ್ನಿ ದುರಂತ ಸಂಭವಿಸಿದ ಕಾರಣ ಹೌಸ್‌ಬೋಟ್‌ನಲ್ಲಿದ್ದ ಮೂವರು ಬಾಂಗ್ಲಾದೇಶದ ಪ್ರವಾಸಿಗರು ಮೃತಪಟ್ಟಿದ್ದಾರೆ. ಹಾಗೆಯೇ, ಅಗ್ನಿಯ ಕೆನ್ನಾಲಗೆಯು ಬೇರೆ ಹಡಗುಗಳಿಗೂ ವ್ಯಾಪಿಸಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ಅಗ್ನಿ ದುರಂತದ ಮಾಹಿತಿ ಲಭ್ಯವಾಗುತ್ತಲೇ ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿದೆ. ಹಲವು ಪ್ರವಾಸಿಗರನ್ನು ಬೆಂಕಿಯ ಕೆನ್ನಾಲಗೆಯಿಂದ ರಕ್ಷಿಸಲಾಗಿದೆ. ಆದರೂ ಬಾಂಗ್ಲಾದೇಶದ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಮೂವರ ಶವಗಳನ್ನೂ ಹೊರತೆಗೆಯಲಾಗಿದೆ. ಅಗ್ನಿ ದುರಂತ ಏಕಾಯಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಫೈರ್‌ ಸರ್ವಿಸ್‌ನ ಸ್ಟೇಷನ್‌ ಹೌಸ್‌ ಆಫೀಸರ್‌ ಫಾರೂಕ್‌ ಅಹ್ಮದ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಅಪಘಾತಗಳ ‘ಸರಣಿ’; 9 ಜನರ ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಕೋಟ್ಯಂತರ ರೂಪಾಯಿ ನಷ್ಟ

ಮೊದಲು ಸಫೀನಾ ಎಂಬ ದೋಣಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ದಾಲ್‌ ಸರೋವರದ ಬಳಿ ಬರುವಷ್ಟರಲ್ಲಿ ಬೆಂಕಿಯು ಬೇರೆ ದೋಣಿಗಳಿಗೆ ವ್ಯಾಪಿಸಿದೆ. ಸುಮಾರು ಐದು ದೋಣಿಗಳು ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿವೆ. ಅಲ್ಲದೆ, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಕೂಡ ಸುಟ್ಟು ಭಸ್ಮವಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Exit mobile version