Site icon Vistara News

ದೇಶದ ಹಲವೆಡೆ ಮಳೆ, ಭೂಕುಸಿತ, ನೋಡನೋಡುತ್ತಿದ್ದಂತೆಯೇ ಕೊಚ್ಚಿ ಹೋಯಿತು ಎರಡು ಮಹಡಿಗಳ ಮನೆ

himachal mandi

ನವ ದೆಹಲಿ: ದೇಶದಲ್ಲಿ ವರುಣಾರ್ಭಟ ಮತ್ತೆ ಜೋರಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಹಿಮಾಚಲ ಪ್ರದೇಶಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಮನೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ಹಿಮಾಚಲದಲ್ಲಿ ಮಳೆಯಿಂದಾಗಿ ಐವರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ೨೭ಕ್ಕೇರಿದೆ.

ಒಡಿಶಾದ ಉತ್ತರ ಭಾಗದ ಹಲವು ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ೧೦೦ಕ್ಕೂ ಅಧಿಕ ಊರುಗಳು ಸಂಕಷ್ಟಕ್ಕೆ ಒಳಗಾಗಿವೆ. ಜಾರ್ಖಂಡ್‌ ಭಾಗದ ಅಣೆಕಟ್ಟುಗಳಿಂದ ನೀರು ಬಿಡುತ್ತಿರುವುದರಿಂದ ಬಾಲಸೋರ್‌, ಮಯೂರ್‌ ಭಂಜ್‌ ಜಿಲ್ಲೆಗಳಲ್ಲಿ ಭಾರಿ ಸಮಸ್ಯೆ ಉಂಟಾಗಿದೆ.

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭಾರಿ ಪ್ರವಾಹ ಮತ್ತು ಭೂಕುಸಿತದಿಂದ ಎರಡು ಮಹಡಿಗಳ ಮನೆಯಿಂದ ಕೊಚ್ಚಿ ಹೋಗಿದೆ. ಚಂಬಾ ಜಿಲ್ಲೆಯ ಭಟ್ಟಿಯಾತ್‌ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಈ ಘಟನೆ ನಡೆದಿದೆ. ಆದರೆ, ಈ ಮನೆಗೆ ಅಪಾಯವಿದೆ ಎಂದು ಅಧಿಕಾರಿಗಳು ಮೊದಲೇ ಅಂದಾಜಿಸಿದ್ದರಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ, ಮನೆಯ ಎದುರು ನಿಲ್ಲಿಸಿದ್ದ ಕಾರೊಂದು ಪುಡಿಪುಡಿಯಾಗಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳಾಗಿರುವ ಜೈರಾಮ್‌ ಠಾಕೂರ್‌ ಅವರು ಮಂಡಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಇಲ್ಲಿ ಹಠಾತ್‌ ಪ್ರವಾಹ ಮತ್ತು ಭೂಕುಸಿತದಿಂದ ಕಳೆದ ವಾರವೇ ೨೨ ಮಂದಿ ಪ್ರಾಣ ಕಳೆದುಕೊಂಡಿದ್ದರು. ಶನಿವಾರ ಕಂಗ್ರಾದಲ್ಲಿ ಚಕ್ಕಿ ನದಿಗೆ ಅಡ್ಡಲಾಗಿ ಕಟ್ಟಲಾದ ರೈಲ್ವೆ ಸೇತುವೆಯೇ ಕೊಚ್ಚಿ ಹೋಗಿದೆ. ಹೀಗಾಗಿ ಇಲ್ಲಿನ ರೈಲು ಸಂಚಾರಕ್ಕೆ ತೊಡಕಾಗಿದೆ.

Exit mobile version