ಮಹಾರಾಷ್ಟ್ರದಲ್ಲಿ ಎಚ್3ಎನ್2 ಸೋಂಕಿಗೆ (H3N2 virus) ಒಳಗಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ಎಚ್3ಎನ್2 ಸೋಂಕಿನಿಂದ ಘಟಿಸಿದ ಮೊದಲ ಸಾವು ಎಂದು ಹೇಳಲಾಗುತ್ತಿದ್ದರೂ, ಈ ವಿದ್ಯಾರ್ಥಿಗೆ ಕೊವಿಡ್ 19 ಕೂಡ ಪಾಸಿಟಿವ್ ಬಂದಿದ್ದರಿಂದ, ಮೃತಪಟ್ಟಿದ್ದು ಎಚ್3ಎನ್2 ವೈರಸ್ನಿಂದಲೋ, ಕೊರೊನಾದಿಂದಲೋ ಎಂಬುದು ದೃಢಪಟ್ಟಿಲ್ಲ. ಶವಪರೀಕ್ಷೆ ವರದಿ ಬಳಿಕವಷ್ಟೇ ಇದು ಸ್ಪಷ್ಟವಾಗಲಿದೆ.
23ವರ್ಷದ ಈ ವಿದ್ಯಾರ್ಥಿ ಅಹ್ಮದ್ನಗರದವನಾಗಿದ್ದು, ಇತ್ತೀಚೆಗೆ ದಕ್ಷಿಣ ಮುಂಬಯಿಯಲ್ಲಿರುವ ಅಲಿಬಾಗ್ ಬೀಚ್ಗೆ ಪಿಕ್ನಿಕ್ಗೆ ತೆರಳಿದ್ದ. ಅಲ್ಲಿಂದ ಬಂದವನಿಗೆ ಆರೋಗ್ಯ ಕೈಕೊಟ್ಟಿತ್ತು. ಪರೀಕ್ಷೆ ಮಾಡಿಸಿದಾಗ ಕೊವಿಡ್ 19 ಸೋಂಕಿರುವುದು ದೃಢಪಟ್ಟಿತ್ತು. ಅಹ್ಮದ್ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಆತ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪೋಸ್ಟ್ ಮಾರ್ಟಮ್ ಮಾಡಿದಾಗ ಆತನಲ್ಲಿ ಎಚ್3ಎನ್2 ಇರುವುದು ವೈರಸ್ ಇರುವುದು ಪತ್ತೆಯಾಗಿದೆ. ಆದರೆ ಮೃತಪಟ್ಟ ಕಾರಣ ಕೊವಿಡ್ 19 ಸೋಂಕೋ ಅಥವಾ ಎಚ್3ಎನ್2 ಸೋಂಕೋ ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: H3N2 Virus: ಎಚ್3ಎನ್2 ಸೋಂಕಿನ ಬೆನ್ನಲ್ಲೇ ಕೊರೊನಾ ಕೇಸ್ ಹೆಚ್ಚಳ, ರಾಜ್ಯಗಳಿಗೆ ಕೇಂದ್ರ ಹಲವು ಸೂಚನೆ
ಎಚ್3ಎನ್2 ಸೋಂಕು ಸದ್ಯ ಭಾರತದಲ್ಲಿ ಹೆಚ್ಚಾಗಿಯೇ ಬಾಧಿಸುತ್ತಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ತಜ್ಞರು ಹೇಳಿದ್ದಾರೆ. ಕರ್ನಾಟಕ, ಹರ್ಯಾಣ, ಪಂಜಾಬ್ ಮತ್ತು ಗುಜರಾತ್ಗಳಲ್ಲಿ ಈಗಾಗಲೇ ಎಚ್3ಎನ್2 ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಸೋಂಕಿಗೂ ಕೊರೊನಾಕ್ಕೂ ಏನೂ ಸಂಬಂಧವೇ ಇಲ್ಲ. ಆದರೆ ಎಚ್3ಎನ್2 ಕಾಣಿಸಿಕೊಂಡವರಲ್ಲಿ ಕೊರೊನಾ ಪತ್ತೆಯಾಗಬಹುದು, ಹಾಗೇ, ಕೊರೊನಾ ಇದ್ದವರಿಗೂ ಎಚ್3ಎನ್2 ಬಾಧಿಸಬಹುದು. ಮಾರ್ಚ್ ಅಂತ್ಯದಿಂದ ಎಚ್3ಎನ್2 ಸೋಂಕಿನ ಪ್ರಮಾಣ ತಗ್ಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.