ನವದೆಹಲಿ: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪದ ನಂತರ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳ ಗುಣಮಟ್ಟ ತಪಾಸಣೆಗೆ ಭಾರತೀಯ ಆಹಾರ ಸುರಕ್ಷತಾ ನಿಯಂತ್ರಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸೋಮವಾರ ಆದೇಶಿಸಿದೆ ಎಂದು ವರದಿಯೊಂದು ತಿಳಿಸಿದೆ.
ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಎಥಿಲೀನ್ ಆಕ್ಸೈಡ್ (Ethylene Oxide) ಇರುವಿಕೆಯನ್ನು ಪತ್ತೆ ಹಚ್ಚಲು ತಪಾಸಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿಂಗಾಪುರದ ಬೆನ್ನಲ್ಲೇ ಹಾಂಕಾಂಗ್‌ನಲ್ಲೂ ಭಾರತದ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್ ರಾಸಾಯನಿಕ ಇರುವ ಕಾರಣ ಹಾಂಕಾಂಗ್ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿತ್ತು.
ನಿಷೇಧಿತ ಮಸಾಲ
ಹಾಂಕಾಂಗ್‌ನ ಸೆಂಟರ್ ಫಾರ್ ಫುಡ್ ಸೇಫ್ಟಿ ವಿಭಾಗವು ಎಂಡಿಎಚ್‌ನ ಮದ್ರಾಸ್ ಕರಿ ಪೌಡರ್, ಸಾಂಬಾರ್ ಮಸಾಲ ಪೌಡರ್ ಮತ್ತು ಕರಿ ಪೌಡರ್ ಹಾಗೂ ಎವರೆಸ್ಟ್ ಗ್ರೂಪ್‌ನ ಫಿಶ್ ಕರಿ ಮಸಾಲದ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕೀಟ ನಾಶಕದ ಅಂಶ ಪತ್ತೆಯಾಗಿತ್ತು. “ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್ ಎಥಿಲೀನ್ ಆಕ್ಸೈಡ್ ಪತ್ತೆಯಾಗಿದೆ. ಈ ಆಕ್ಸೈಡ್ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್ ಕಾರಕ ಕಾರ್ಸಿನೋಜೆನಿಕ್ ರಾಸಾಯನಿಕವೂ ಪತ್ತೆಯಾಗಿದೆ. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ” ಎಂದು ಹಾಂಕಾಂಗ್‌ನ ಸೆಂಟರ್ ಫಾರ್ ಫುಡ್ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್ 5ರಂದೇ ಆದೇಶ ಹೊರಡಿಸಿದೆ.
ಕ್ಯಾನ್ಸರ್ ಕುರಿತು ಸಂಶೋಧನೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೇ ಎಥಿಲೀನ್ ಆಕ್ಸೈಡ್‌ನ ಅಪಾಯದ ಕುರಿತು ವರದಿ ನೀಡಿದೆ. ಇದು ಕ್ಯಾನ್ಸರ್ ಕಾರಕ ಎಂಬುದಾಗಿ ಜಾಗತಿಕ ಸಂಸ್ಥೆ ತಿಳಿಸಿದೆ. ಹಾಗಾಗಿ, ನಾಲ್ಕೂ ಉತ್ಪನ್ನಗಳ ಸಂಗ್ರಹ, ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹಾಂಕಾಗ್ ತಿಳಿಸಿದೆ. ಅನುಮತಿ ನೀಡಿದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿ ಇಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಕೂಡ ಎವರೆಸ್ಟ್ ಫಿಶ್ ಕರಿ ಮಸಾಲಾ ನಿಷೇಧಿಸುವಾಗ ತಿಳಿಸಿತ್ತು.
ಇದನ್ನೂ ಓದಿ: Pesticide: ಎವರೆಸ್ಟ್ ಫಿಶ್ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್ ಮಾಡಿದ ಸಿಂಗಾಪುರ
ಎಂಡಿಎಚ್ ಕಂಪೆನಿಯನ್ನು 1959ರಲ್ಲಿ ಧರ್ಮಪಾಲ್ ಗುಲಾಟಿ ಸ್ಥಾಪಿಸಿದ್ದರು. ಎವರೆಸ್ಟ್ ಕಂಪೆನಿಯನ್ನು ವಾದಿಲಾಲ್ ಶಾ ಆರಂಭಿಸಿದ್ದಾರೆ. ಈ ಕಂಪೆನಿಗಳ ಉತ್ಪನ್ನಗಳನ್ನು ಅಮೆರಿಕ, ಯುರೋಪ್, ಇಂಗ್ಲೆಂಡ್ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.