Site icon Vistara News

Meenakshi Lekhi: ಭಾರತ್‌ ಮಾತಾ ಕೀ ಜೈ ಘೋಷಣೆ ಕೂಗಲು ನಿರಾಕರಿಸಿದವರ ಬಗ್ಗೆ ಬಿಜೆಪಿ ನಾಯಕಿ ಹೇಳಿದ್ದೇನು?

meenakshi lekhi

meenakshi lekhi

ತಿರುವನಂತಪುರಂ: ʼʼಭಾರತ್‌ ಮಾತಾ ಕೀ ಜೈʼʼ (Bharat Mata Ki Jai) ಘೋಷಣೆ ಕೂಗಲು ನಿರಾಕರಿಸಿದ ಗುಂಪಿನ ವಿರುದ್ಧ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakshi Lekhi) ಕಿಡಿ ಕಾರಿದ್ದಾರೆ. ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ. ಕೊನೆಗೆ ಅಸಮಾಧನಗೊಂಡ ಸಚಿವೆ ಘೋಷಣೆ ಕೂಗಲು ನಿರಾಕರಿಸಿದ ಮಹಿಳೆಯೊಬ್ಬರಿಗೆ ಹೊರಗೆ ಹೋಗುವಂತೆ ಸೂಚಿಸಿದ ಪ್ರಸಂಗವೂ ನಡೆದಿದೆ.

ಏನಿದು ಘಟನೆ?

ಕೋಝಿಕ್ಕೋಡ್‌ನಲ್ಲಿ ನಡೆದ ಯುವ ಸಮಾವೇಶವೊಂದರಲ್ಲಿ ಭಾಷಣ ಮಾಡಿದ ಮೀನಾಕ್ಷಿ ಲೇಖಿ ಕೊನೆಗೆ ʼʼಭಾರತ್ ಮಾತಾಕಿ ಜೈʼʼ ಎಂದು ಉದ್ಘರಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ನೆರೆದಿದ್ದ ಕೆಲವು ಮಂದಿ ಇದಕ್ಕೆ ಧ್ವನಿಗೂಡಿಸಲಿಲ್ಲ. ಅವರು ಹಲವು ಬಾರಿ ಕೇಳಿಕೊಂಡರೂ ಜನ ಸಮೂಹದ ಒಂದು ಭಾಗವು ಮೌನವಾಗಿತ್ತು. ಇದರಿಂದ ಅವರು ಅಸಮಾಧಾನಗೊಂಡಿದ್ದಾರೆ.

ʼʼಭಾರತವು ಕೇವಲ ನಮ್ಮ -ನಿಮ್ಮ ತಾಯಿ ಮಾತ್ರವಲ್ಲ. ಭಾರದಾಂಬೆ ಎಲ್ಲರಿಗೂ ಸೇರಿದವಳು. ಈ ಬಗ್ಗೆ ಅನುಮಾನವಿದೆಯೇ? ಭಾರತ್ ಮಾತಾ ಕಿ ಜೈ ಎಂದರೆ ಏನಾಗಿ ಬಿಡುತ್ತದೆ?ʼʼ ಎಂದು ಪ್ರಶ್ನಿಸಿದ್ದಾರೆ. ಈ ಮಧ್ಯೆ ಹಳದಿ ಸೀರೆ ಧರಿಸಿದ ಮಹಿಳೆಯೊಬ್ಬರನ್ನು ನಿಲ್ಲುವಂತೆ ಕೇಳಿ, ಒಮ್ಮೆ ಭಾರತ್ ಮಾತಾಕಿ ಜೈ ಎಂದು ಹೇಳಿ ಎಂದು ಕೇಳಿದ್ದಾರೆ. ಆದರೆ ಆ ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ರಾಷ್ಟ್ರದ ಬಗ್ಗೆ ಹೆಮ್ಮೆ ಇಲ್ಲದವರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೊರಗೆ ಹೋಗಿ ಎಂದು ಲೇಖಿ ಹೇಳಿದ್ದಾರೆ. ತಪಸ್ಯಾ, ನೆಹರು ಯುವ ಕೇಂದ್ರ ಮತ್ತು ಬಲ ಪಂಥೀಯ ಸಂಘಟನೆಗಳು ಜಂಟಿಯಾಗಿ ಈ ಜಾಗೃತಿ ಯುವ ಸಭೆಯನ್ನು ಆಯೋಜಿಸಿದ್ದವು.

ರಾಜ್ಯಪಾಲರನ್ನು ಹೊಗಳಿದ ಮೀನಾಕ್ಷಿ ಲೇಖಿ

ಭಾಷಣೆ ವೇಳೆ ಮೀನಾಕ್ಷಿ ಲೇಖಿ ಅವರು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ತಮ್ಮ ಆದರ್ಶ ನಾಯಕ ಎಂದು ಬಣ್ಣಿಸಿದರು. ʼʼಶಾ ಬಾನೊ ಪ್ರಕರಣದ ತೀರ್ಪನ್ನು ವಿರೋಧಿಸಿ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ರಾಜೀವ್‌ ಗಾಂಧಿ ಅವರ ಕ್ಯಾಬಿನೆಟ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ತ್ರಿಪಲ್‌ ತಲಾಕ್‌ ನಿಷೇಧಿಸುವಂತೆ ಅವರು ಪಟ್ಟು ಹಿಡಿದಿದ್ದರು. ಆ ಸಮಯದಲ್ಲಿ ನಾನು ಕಾಲೇಜು ವಿದ್ಯಾರ್ಥಿನಿಯಾಗಿದ್ದೆ. ಇದೀಗ ತ್ರಿಪಲ್‌ ತಲಾಕ್‌ ನಿಷೇಧಿಸಿದ ಕ್ಯಾಬಿನೆಟ್‌ನಲ್ಲಿ ಸದಸ್ಯಳಾಗಿದ್ದೇನೆʼʼ ಎಂದು ಹೆಮ್ಮೆಯಿಂದ ಹೇಳಿದರು.

ʼʼದೇಶದ ಜನಸಂಖ್ಯೆಯಲ್ಲಿ ಶೇ. 65ರಷ್ಟು ಮಂದಿ 35 ವರ್ಷಕ್ಕಿಂತ ಒಳಗಿನವರಿದ್ದಾರೆ. ಹೀಗಾಗಿ ಈ ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು 2047ರ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಕಲ್ಪ ತೊಟ್ಟಿದ್ದಾರೆ. ನೀವು 2047ರ ನಾಯಕರು. ನೀವು ಇವತ್ತು ಕಾಣುವ ಕನಸು ಭವಿಷ್ಯದಲ್ಲಿ ನನಸಾಗಲಿದೆ. ಮೋದಿ ಗ್ಯಾರಂಟಿ ಕೇರಳಕ್ಕೂ ಅನ್ವಯವಾಗುತ್ತದೆʼʼ ಎಂದು ಲೇಖಿ ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: 150 ಕಿ.ಮೀ ನಡೆದು ರಾಮಮಂದಿರ ದರ್ಶನ ಪಡೆದ 350 ಮುಸ್ಲಿಮರು; Video ಇದೆ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಯುವ ಜನತೆ ಕೆಲವೊಂದು ವಿಚಾರಗಳಿಗೆ ಹಿಂಜರಿಯುತ್ತಾರೆ. ಪ್ರತಿಭೆ ಇದ್ದರೂ ಗುರುತಿಸಿಕೊಳ್ಳಲು ಸಂಕೋಚಪಡುತ್ತಾರೆ. ಅಂತಹವರನ್ನು ಬೆಳಕಿಗೆ ತರಬೇಕುʼʼ ಎಂದು ಅಭಿಪ್ರಾಯಪಟ್ಟರು. ಕೇಂದ್ರವು ರಾಜ್ಯ ಸರ್ಕಾರದ ಬಗ್ಗೆ ತಾರತಮ್ಯದ ಮನೋಭಾವವನ್ನು ಹೊಂದಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಲು ಸಚಿವೆ ನಿರಾಕರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version