ಮೀರತ್: ಉತ್ತರ ಪ್ರದೇಶದ ಮೀರತ್ನ ಪೊಲೀಸರು (Meerut Police) ಅಲ್ಲೀಗ ಮನೆಮನೆಗೆ ನುಗ್ಗಿ, ಅಲ್ಲೆಲ್ಲ ಹುಡುಕಾಟ ನಡೆಸುತ್ತಿದ್ದಾರೆ. ಮನೆ ಮಾಲೀಕರ ವಿಚಾರಣೆ ನಡೆಸುತ್ತಿದ್ದಾರೆ. ಇದು ಯಾವುದೇ ಕಳೆದು ಹೋದ ಚಿನ್ನ-ಬೆಳ್ಳಿಗಾಗಿ ಅಲ್ಲ. ದಾಖಲೆಗಳಿಗಾಗಿಯೂ ಅಲ್ಲ. ಒಂದು ನಾಯಿಗಾಗಿ ಅವರು ಇಷ್ಟೊಂದು ಹುಡುಕಾಟ ನಡೆಸುತ್ತಿದ್ದಾರೆ. ಕಳೆದ 36ಗಂಟೆಯಲ್ಲಿ ಏನಿಲ್ಲವೆಂದರೂ 500 ಮನೆಗಳಲ್ಲಿ ಅವರು ನಾಯಿಗಾಗಿ ಶೋಧ (Meerut Police Search For Dog) ನಡೆಸಿದ್ದಾರೆ-ವಿಚಾರಿಸಿದ್ದಾರೆ.
ಮತ್ತೇನಲ್ಲ, ಕಳೆದು ಹೋಗಿರುವುದು ಪೊಲೀಸ್ ಆಯುಕ್ತರಾದ ಸೆಲ್ವಾ ಕುಮಾರಿ ಜೆ ಅವರ ನಾಯಿ. ಹೀಗಾಗಿ ಪೊಲೀಸ್ ಸಿಬ್ಬಂದಿ ವಿಶೇಷ ಕಾಳಜಿ ತೆಗೆದುಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಜರ್ಮನ್ ಶೆಫರ್ಡ್ ತಳಿಯ ನಾಯಿ ಇದಾಗಿದ್ದು, ಮೀರತ್ನಲ್ಲಿ ಈ ಬ್ರೀಡ್ನ ಕೇವಲ 19 ನಾಯಿಗಳು ಮಾತ್ರ ಇವೆ. ಆಯುಕ್ತರ ನಾಯಿಯನ್ನು ಯಾರೋ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಆಯುಕ್ತೆ ಸೆಲ್ವಾ ಕುಮಾರಿ ಅವರು ಪ್ರೀತಿಯಿಂದ ಸಾಕಿದ ಈ ನಾಯಿ ಹೆಸರು ಇಕೊ. ಭಾನುವಾರ ಸಂಜೆ 6ಗಂಟೆಯಿಂದ ಇದು ನಾಪತ್ತೆಯಾಗಿದೆ. ಪೊಲೀಸ್ ಆಯುಕ್ತರ ಮನೆಯಲ್ಲಿ ನಿಯೋಜಿತರಾಗಿರುವ ಸಿಬ್ಬಂದಿ ಎಲ್ಲ ಸೇರಿ ಇಕೊನನ್ನು ಹುಡುಕುತ್ತಿದ್ದಾರೆ. 36ಗಂಟೆಗಳಲ್ಲಿ 500 ಮನೆಗಳನ್ನು ಹುಡುಕಿದ್ದರೂ ನಾಯಿ ಮಾತ್ರ ಪತ್ತೆಯಾಗುತ್ತಿಲ್ಲ. ಇಕೊಗಾಗಿ ಹುಡುಕಾಟ ನಡೆಸಿ ಪೊಲೀಸರೇ ಸುಸ್ತಾಗಿದ್ದಾರೆ.
ಇದನ್ನೂ ಓದಿ: Street Dogs Survey: ಡ್ರೋನ್‌ನಲ್ಲೇ ಬೀದಿ ನಾಯಿಗಳ ಗಣತಿ; ಮೈಕ್ರೋ ಚಿಪ್ ಅಳವಡಿಕೆಗೆ ಪಾಲಿಕೆ ಸಜ್ಜು
ಇನ್ನು ನಾಯಿ ಕಾಣೆಯಾಗುತ್ತಿದ್ದಂತೆ ಆಯುಕ್ತರ ಮನೆಯಲ್ಲಿ ಗೊಂದಲ-ಗಡಿಬಿಡಿ ಉಂಟಾಗಿತ್ತು. ಭಾನುವಾರ ಮಧ್ಯರಾತ್ರಿಯೇ, ಮುನ್ಸಿಪಲ್ ಕಾರ್ಪೋರೇಶನ್ನ ಪ್ರಾಣಿ ಕಲ್ಯಾಣ ಅಧಿಕಾರಿ ಡಾ. ಹರ್ಪಾಲ್ ಸಿಂಗ್ ಅವರು ಆಯುಕ್ತರ ಮನೆಗೆ ತಲುಪಿದರು. ನಾಯಿಯ ಫೋಟೋ ಮತ್ತು ಮಾಹಿತಿಯನ್ನು ತೆಗೆದುಕೊಂಡರು. ಅಲ್ಲಿಂದಲೇ ಹುಡುಕಾಟವೂ ಶುರುವಾಯಿತು. ಇನ್ನೊಂದೆಡೆ ಪೊಲೀಸರು ಅಗತ್ಯ ಸ್ಥಳಗಳಲ್ಲಿ ಹಾಕಲಾದ ಸಿಸಿಟಿವಿ ಕ್ಯಾಮರಾಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.